ಉಡುಪಿ: ಹೊಸ ವಾಣಿಜ್ಯ ಕಟ್ಟಡಗಳ ಮುಂಭಾಗ ಸ್ವಲ್ಪ ಜಾಗವಿದ್ದರೆ ರಿಕ್ಷಾಗಳನ್ನು ತಂದು ನಿಲ್ಲಿಸಿ ಕ್ರಮೇಣ ನಿಲ್ದಾಣವಾಗಿ ಪರಿವರ್ತಿಸುವ ಪ್ರವೃತ್ತಿ ನಗರದಲ್ಲಿ ಹೆಚ್ಚುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ವಾಹನ ನಿಲ್ಲಿಸಲು ಜಾಗವಿಲ್ಲದಂತಾಗಿದೆ. ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಸದಸ್ಯರು ಆಗ್ರಹಿಸಿದ್ದಾರೆ.
ಶುಕ್ರವಾರ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಪ್ರಸ್ತುತ ನಗರ ಭಾಗದಲ್ಲಿ ಅತ್ಯಧಿಕ ಆಟೋರಿಕ್ಷಾಗಳು ಕಾರ್ಯಾಚರಣೆ ಮಾಡಿಕೊಂಡಿದ್ದು, ಮುಂದೆ ನಗರಭಾಗದಲ್ಲಿ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಬಾರದು. ನಗರದ ಎಲ್ಲೆಡೆ ಖಾಲಿ ಜಾಗಗಳಲ್ಲಿ ರಿಾ ನಿಲ್ದಾಣಗಳು ತಲೆಎತ್ತುತ್ತಿದ್ದು, ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ. ನಾರ್ತ್ ಶಾಲೆ ಸಮೀಪ ಸಾರ್ವಜನಿಕರ ಪಾರ್ಕಿಂಗ್ ಸ್ಥಳದಲ್ಲಿ ಇತ್ತೀಚೆಗೆ ಹೊಸದಾಗಿ ರಿಕ್ಷಾ ನಿಲ್ದಾಣ ಪ್ರಾರಂಭವಾಗಿದೆ. ಇದಕ್ಕೆ ಅನುಮತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ನಗರಕ್ಕೆ ಬೇಕಾಗಿರುವ ರಿಕ್ಷಾಗಳಿಗಿಂತ ಹೆಚ್ಚಿನ ಸಂಖೆಯಲ್ಲಿ ರಿಕ್ಷಾಗಳು ಕಾರ್ಯಾಚರಿಸುತ್ತಿವೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಉದ್ಭವಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆಯಿಂದ ವರದಿ ತರಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಉಡುಪಿ, ಮಲ್ಪೆ , ಮಣಿಪಾಲದ ಹಲವೆಡೆ ಪಾರ್ಕಿಂಗ್ ಸ್ಲಾಟ್ಗಳನ್ನು ಗುರುತಿಸುವ ಕೆಲಸವಾಗಬೇಕು. ವಿವಿಧ ಭಾಗಗಳಲ್ಲಿ ಸಿಗ್ನಲ್ ಲೈಟ್ಗಳು ಕಾರ್ಯಾಚರಣೆ ಮಾಡುತ್ತಿಲ್ಲ. ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನ, ಕೆಎಂಸಿ ಆಸ್ಪತ್ರೆಯ ಎದುರುಭಾಗದ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಎಂಐಟಿ ಬಳಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಅಲ್ಲದೆ ಎಲ್ಲೆಂದರಲ್ಲಿ ಗೂಡಂಗಡಿಗಳು ಕಾರ್ಯಾಚರಿಸುತ್ತಿರುವುದರಿಂದ ಟ್ರಾಫಿಕ್ ದಟ್ಟನೆ ಉಂಟಾಗುತ್ತಿದೆ. ಈ ಬಗ್ಗೆ ಪೊಲೀಸರು ದಂಡ ವಿಧಿಸಬೇಕು ಎಂದು ಸೂಚಿಸಿದರು.
ಪೌರಾಯುಕ್ತ ಡಾ. ಉದಯ ಶೆಟ್ಟಿ ಮಾತನಾಡಿ, ಆಟೋರಿಕ್ಷಾ ನಿಲ್ದಾಣಕ್ಕೆ ನಗರಸಭೆಯ ಮೂಲಕ ಪ್ರತ್ಯೇಕ ನಿಯಮಾವಳಿ ರೂಪಿಸಲಾಗುವುದು. ಅನಧಿಕೃತ ಆಟೋರಿಕ್ಷಾ ನಿಲ್ದಾಣಗಳ ಪಟ್ಟಿ ಮಾಡಿ ಅವುಗಳ ತೆರವಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆ ಈಗ ಹಲವು ಪಟ್ಟು ಹೆಚ್ಚಿದೆ. ಇದರಿಂದ ಸ್ಥಳಾವಕಾಶ ಕೊರತೆಯಾಗಿದೆ. ಪಾರ್ಕಿಂಗ್ಗೆ ನಗರಸಭೆಯೇ ಸೂಕ್ತ ಸ್ಥಳ ಗುರುತಿಸಬೇಕು. ಕಲ್ಸಂಕದಲ್ಲಿ ವೈಜ್ಞಾನಿಕವಾಗಿ ಫ್ರೀಲೆಫ್ಟ್ ನಿರ್ಮಾಣವಾಗಬೇಕು. ಇದರಿಂದ ಸಂಚಾರ ದಟ್ಟಣೆ ನಿಯಂತ್ರಿಸಬಹುದು ಎಂದರು.
ಸದಸ್ಯ ಟಿ.ಜಿ. ಶೆಟ್ಟಿ ಮಾತನಾಡಿ, ನಗರದ ಹಲವೆಡೆ ನಿಯಮ ಮೀರಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಸಾರ್ವಜನಿಕ ರಸ್ತೆಯಲ್ಲಿ ಕಂಪೌಂಡ್ ಕಟ್ಟಿದ್ದರೂ ಅಧಿಕಾರಿಗಳು ತೆರವುಗೊಳಿಸುತ್ತಿಲ್ಲ ಎಂದು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಶಿರಿಬೀಡು ವಾರ್ಡ್ನಲ್ಲಿ ರಸ್ತೆ ಅತಿಕ್ರಮಿಸಿ ಕಟ್ಟಡ ನಿರ್ಮಿಸಿರುವ ಬಗ್ಗೆ ಪತ್ರ ಬರೆದರೂ ಅಧಿಕಾರಿಗಳು ಉತ್ತರ ನೀಡಿಲ್ಲ. ಮತ್ತೆ ವಿಚಾರಿಸಿದ ಮೇಲೆ ನೋಟಿಸ್ ನೀಡಿದ್ದಾರೆ. ಇದಕ್ಕೆ ಮಾಲೀಕರು ಹೈಕೋರ್ಟ್ನಿಂದ ತಡೆ ತಂದಿದ್ದಾರೆ. ನೋಟಿಸ್ ನೀಡುವುದು ಪರಿಹಾರವಲ್ಲ. ಅಕ್ರಮವಾಗಿ ಕಟ್ಟಿದ್ದರೆ ಕೂಡಲೇ ಧ್ವಂಸ ಮಾಡಬೇಕು. ನಗರಸಭೆ ಚುನಾಯಿತ ಸಮಿತಿಯ ಆಡಳಿತವಿಲ್ಲದ ಸಮಯದಲ್ಲಿ ಅನುಮತಿ ನೀಡಿದ್ದೇ ಅಕ್ರಮ ಎಂಬುದಾಗಿ ರ್ನಿಣಯ ತೆಗೆದುಕೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ಬಬ್ಬುಸ್ವಾಮಿ ಲೇ ಔಟ್ನಲ್ಲಿ ಯಾವುದೇ ಮೂಲಸೌಕರ್ಯವಿಲ್ಲದೆ ಸ್ಥಳಿಯರು ತೊಂದರೆ ಅನುಭವಿಸುತ್ತಿದ್ದಾರೆ. ಕೊಳಚೆ ನಿಮೂರ್ಲನಾ ಮಂಡಳಿ ಮನೆಗಳನ್ನು ನಿರ್ಮಾಣ ಮಾಡುವ ಮುನ್ನ ಮೂಲ ಸೌಕರ್ಯ ನೀಡಲು ಗಮನಹರಿಸಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಯೋಜನೆ ಜಾರಿಗೆ ಮುನ್ನ ನಗರಸಭೆ ಬೈಲಾ ಸಮರ್ಪಕವಾಗಿ ಪಾಲಿಸಬೇಕು. ಈ ಬಗ್ಗೆ ರ್ನಿಣಯಕೈಗೊಳ್ಳಬೇಕು ಎಂದರು.
ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ನಗರದಲ್ಲಿ ಬೀದಿ ನಾಯಿ ಮತ್ತು ಹುಚ್ಚುನಾಯಿಗಳ ಕಾಟ ವಿಪರೀತವಾಗಿದ್ದು, ಜನರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ ಎಂದರು.
ಇದಕ್ಕೆ ಉತ್ತರಿಸಿದ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ರೆಡ್ಡಪ್ಪ, ಪ್ರಾಣಿಕಲ್ಯಾಣ ಮಂಡಳಿ ನಿಯಮ ಪ್ರಕಾರ ಬೀದಿ ನಾಯಿಗಳ ಸಂತಾನಹರಣ ಮತ್ತು ರೇಬಿಸ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1.18 ಲಕ್ಷ ನಾಯಿಗಳಿದ್ದು, ಈಗಾಗಲೇ 48 ಸಾವಿರ ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗಿದೆ. 1 ಲಕ್ಷ ರೇಬಿಸ್ ಲಸಿಕೆ ಸರಬರಾಜಾಗಿದೆ ಎಂದು ಮಾಹಿತಿ ನೀಡಿದರು. ಉಪಾಧ್ಯೆ ರಜನಿ ಹೆಬ್ಬಾರ್, ಸ್ಥಾಯೀ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.