ಚಿಕ್ಕಬಳ್ಳಾಪುರ: ಅನ್ಯ ಭಾಷೆ ಫಲಕಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಿರುವ ಗೌರಿಬಿದನೂರು ನಗರಸಭೆ, ನಗರದ ಅಂಗಡಿ ಮುಂಗಟ್ಟುಗಳು, ಹೋಟೆಲ್, ವಾಣಿಜ್ಯ ಸಂಕೀರ್ಣಗಳಲ್ಲಿ ಅಳವಡಿಸುವ ಆಂಗ್ಲ ಭಾಷೆ ಫಲಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು.
ನಗರಸಭೆ ಆಯುಕ್ತೆ ಡಿ.ಎಂ.ಗೀತಾ, ಆರೋಗ್ಯ ನಿರೀಕ್ಷಕ ನವೀನ್ ಹಾಗೂ ಸಿಬ್ಬಂದಿ ಶುಕ್ರವಾರ ಬೆಳ್ಳಂ ಬೆಳಿಗ್ಗೆ ಅನೇಕ ಅಂಗಡಿಗಳಿಗೆ ತೆರಳಿ, ಕನ್ನಡ ಭಾಷೆಗಿಂತ ಆಂಗ್ಲ ಭಾಷೆಯಲ್ಲಿ ದೊಡ್ಡದಾಗಿ ಅಳವಡಿಸಿದ್ದ ಫಲಕಗಳನ್ನು ತೆರವುಗೊಳಿಸುವ ಕೆಲಸ ಮಾಡಿದರು.
ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಶೇ.40ರಷ್ಟು ಇತರೆ ಭಾಷೆ ಬಳಸಬಹುದು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಅಂಗಡಿ ಮಾಲೀಕರು, ವಾಣಿಜ್ಯ ಮಳಿಗೆಗಳು ನಾಮಫಲಕಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಗರಸಭೆಯೇ ನಾಮ ಫಲಕಗಳನ್ನು ತೆರವುಗೊಳಿಸುವ ಜೊತೆಗೆ ದಂಡ ವಿಧಿಸಲಿದೆ ಎಂದು ಪೌರಾಯುಕ್ತೆ ಡಿ.ಎಂ.ಗೀತಾ ತಿಳಿಸಿದ್ದಾರೆ.