ಮಂಡ್ಯ: ಕುಡಿಯುವ ನೀರಿನಲ್ಲಿ ಯಾವುದೇ ಕಲುಷಿತ ನೀರು ಸೇರದಂತೆ ನೋಡಿಕೊಳ್ಳಿ. ಈ ಸಂಬಂಧ ನಿಯಮಿತವಾಗಿ ನೀರಿನ ಪರೀಕ್ಷೆ ನಡೆಸಿ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ನೀಡುವ ಹಾಗೂ ನಗರಸಭೆ, ಪುರಸಭೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೊದಲ ಆದ್ಯತೆ ನೀಡಬೇಕು. ಸಾರ್ವಜನಿಕರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಳೆಗಾಲ ಪ್ರಾರಂಭವಾಗಿದ್ದು, ಒಳಚರಂಡಿಗಳಲ್ಲಿ ಯಾವುದೇ ಅಡೆತಡೆ ಇಲ್ಲದೇ ನೀರು ಹರಿಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಆಗಿಂದಾಗೆ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ. ಇನ್ನು ಎಸ್.ಎಫ್.ಸಿ, ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ನಿಯಮಾನುಸಾರ ವೆಚ್ಚಮಾಡಿ ಒಂದು ವಾರದೊಳಗೆ ವರದಿ ನೀಡಬೇಕು. ರಾಜ್ಯ ಹಣಕಾಸು ಮತ್ತು 15ನೇ ಹಣಕಾಸು ಯೋಜನೆಯಡಿ ಕೈಗೊಳ್ಳಬಹುದಾದ ಅಗತ್ಯ ಕಾಮಗಾರಿಗಳ ಯೋಜನೆಯನ್ನು ಒಂದು ವಾರದೊಳಗೆ ಸಿದ್ಧಪಡಿಸಿ ಸಲ್ಲಿಸಬೇಕು. ಒಂದು ತಿಂಗಳೊಳಗಾಗಿ 15ನೇ ಹಣಕಾಸು ಯೋಜನೆಯಡಿ ಟೆಂಡರ್ ಆಗಿರುವ ಕಾಮಗಾರಿ ಪ್ರಾರಂಭವಾಗಬೇಕು. ಜತೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಆಸ್ತಿ ತೆರಿಗೆ ಹಾಗೂ ಜಾಹೀರಾತು ತೆರಿಗೆ ಸಂಗ್ರಹಿಸುವ ಕೆಲಸ ಚುರುಕುಗೊಳ್ಳಬೇಕು. ಉದ್ದಿಮೆ ಪರವಾನಗಿ ಹಾಗೂ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದ ಅಂಗಡಿಗಳ ಬಾಡಿಗೆ ಸಂಗ್ರಹಿಸಲು ತಂಡಗಳನ್ನು ರಚಿಸುವಂತೆ ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಡಿಡಿಪಿಐ ಎಚ್.ಶಿವರಾಮೇಗೌಡ, ನಗರಸಭೆ ಆಯುಕ್ತ ಆರ್.ಮಂಜುನಾಥ್ ಇತರರಿದ್ದರು.