ಜಿಲ್ಲೆ

ನಗರಸಭಾ ಕಚೇರಿಗೆ ನಗರ ಕಾಂಗ್ರೆಸ್ ಮುತ್ತಿಗೆ ಹಾಕಿ ಪ್ರತಿಭಟನೆ

ಮಡಿಕೇರಿ: ನಗರಸಭಾ ಆಡಳಿತ ವ್ಯವಸ್ಥೆ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿದೆ ಮತ್ತು ಸಾರ್ವಜನಿಕರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ನಗರಸಭಾ ಕಚೇರಿಗೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿತು.


ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನಗರಸಭೆಗೆ ತೆರಳಿದ ಕಾಂಗ್ರೆಸ್ ಸಮಿತಿಯ ಪ್ರಮುಖರು ನಗರಸಭಾ ಕಚೇರಿ ಎದುರು ಜಮಾಯಿಸಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.


ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್, ಖಾತೆ ವರ್ಗವಣೆ, ಫಾರಂ ನಂ ೩ ಸೇರಿದಂತೆ ವಿವಿಧ ಅರ್ಜಿಗಳನ್ನು ವಿಲೇವಾರಿ ಮಾಡದೆ ಸತಾಯಿಸಲಾಗುತ್ತಿದೆ. ನಗರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಸ್ವಚ್ಛತೆ ಆದ್ಯತೆ ನೀಡುತ್ತಿಲ್ಲ. ನಗರದಲ್ಲಿರುವ ಸುಲಭ್ ಶೌಚಾಲಯಗಳು ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿವೆ. ನಗರದ ಹೃದಯ ಭಾಗವಾದ ಜನರಲ್ ತಿಮ್ಮಯ್ಯ ವೃತ್ತ ವ್ಯಾಪ್ತಿಯಲ್ಲಿ ನೂರಾರು ಪ್ರಯಾಣಿಕರು ಬಸ್ ಗಳಿಗಾಗಿ ಕಾದು ನಿಲ್ಲುತ್ತಾರೆ. ಆದರೆ ಸುಸಜ್ಜಿತ ಬಸ್ ತಂಗುದಾಣ, ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ನಗರಸಭೆ ವಿಫಲವಾಗಿದೆ.


ತರಕಾರಿ ಮತ್ತು ಮಾಂಸದ ಮಾರುಕಟ್ಟೆ ಮೂಲಭೂತ ಸೌಲಭ್ಯಗಳಿಲ್ಲದೆ ಅಶುಚಿತ್ವದಿಂದ ಕೂಡಿದೆ. ಮಾಂಸ ಮಾಡುವ ಪ್ರದೇಶವನ್ನು ವೈಜ್ಞಾನಿಕವಾಗಿ ಸುಸಜ್ಜಿತಗೊಳಿಸದೆ ನಿರ್ಲಕ್ಷಿಸಲಾಗಿದೆ. ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ನಿರ್ಲಕ್ಷಿಸಲಾಗಿದೆ. ನಗರದಲ್ಲಿರುವ ಪಾರ್ಕ್‌ಗಳು ಕಾಡು ಸೇರಿವೆ. ಚರಂಡಿ ಮತ್ತು ತೋಡು ತುಂಬಾ ಹೂಳು ತುಂಬಿದ್ದು, ಸಣ್ಣ ಮಳೆಗೂ ಪ್ರವಾಹದಂತೆ ನೀರು ಹರಿದು ಮನೆಗಳಿಗೆ ನುಗ್ಗುತ್ತಿದೆ. ಆದರೂ ನಗರಸಭೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ನಗರದಲ್ಲಿ ಸಂಗ್ರಹವಾದ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಇಲ್ಲಿಯವರೆಗೆ ಜಾಗ ಗುರುತಿಸಿ ವೈಜ್ಞಾನಿಕ ರೂಪ ನೀಡುವ ಕಾರ್ಯ ಮಾಡಿಲ್ಲ ಎಂದು ಬಿ.ವೈ.ರಾಜೇಶ್ ಆರೋಪಿಸಿದ್ದಾರೆ.


ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ, ಕಾಂಗ್ರೆಸ್ ಮಡಿಕೇರಿ ನಗರ ಅಧ್ಯಕ್ಷೆ ಹೊಟ್ಟೆಂಗಡ ಪಾರ್ವತಿ ಇತರರು ಇದ್ದರು.