ಹಟ್ಟಿಚಿನ್ನದಗಣಿಯಲ್ಲಿ ಸಿಐಟಿಯು ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.  
ಜಿಲ್ಲೆ

ಸಾರ್ವತ್ರಿಕ ಮುಷ್ಕರಕ್ಕೆ ಸಿಐಟಿಯು ಬೆಂಬಲ

ವಿರಾಜಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಜು.9ರಂದು ಕರೆ ನೀಡಿರುವ ಮುಷ್ಕರಕ್ಕೆ ಸಿಐಟಿಯು ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ನೀತಿಗಳಿಗೆ ವಿರುದ್ಧವಾಗಿ ಕಾನೂನು ಜಾರಿಗೆ ತಂದಿದೆ. 9ರಂದು ನಡೆಯುವ ಸಾರ್ವತ್ರಿಕ ಮುಷ್ಕರಕ್ಕೆ ನಮ್ಮ ಸಂಘಟನೆ ಬೆಂಬಲವಿದೆ. ಸುಮಾರು 11 ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೆಲೆ ಏರಿಕೆಯಿಂದಾಗಿ ಕಾರ್ಮಿಕರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ. ಸುಮಾರು 70 ವರ್ಷಗಳಿಂದ ಕಾರ್ಮಿಕರಿಗೆ ನಿಗದಿಗೊಳಿಸಿರುವ ದುಡಿಮೆಯ ಸಮಯ 8 ಗಂಟೆ. ಆದರೆ, ಕೇಂದ್ರ ಸರ್ಕಾರ 8 ಗಂಟೆ ಬದಲು 12 ಗಂಟೆ ದುಡಿಯುವಂತೆ ಕಾನೂನು ಜಾರಿಗೆ ತಂದಿದೆ. ಇದರಿಂದ ದೇಶದಲ್ಲಿ ಕೆಲವು ರಾಜ್ಯಗಳು ಕಾನೂನು ಜಾರಿಗೆ ತಂದಿದೆ. ಕಾರ್ಮಿಕರ ಶ್ರೇಯಸ್ಸು ಕಾಯುವ ಬದಲು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ತರುವಂತಿದೆ. ದುಡಿಮೆಯ ಹಣವು ಅಭಿವೃದ್ಧಿ ಹೆಸರಿನಲ್ಲಿ ಕಾರ್ಪೊರೇಟ್ ಸಂಸ್ಥೆಯ ಮಡಿಲಿಗೆ ಸೇರುತ್ತಿದೆ ಎಂದು ಆರೋಪಿಸಿದರು.

ಹೋರಾಟಕ್ಕೆ ಸಿಐಟಿಯು ಸಂಘಟನೆ ಅಡಿಯಲ್ಲಿ ಬರುವ 9 ಸಂಘಟನೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದುಡಿಯುವ ಕಾರ್ಮಿಕರು ಹಾಗೂ ಇತರ ದಿನಗೂಲಿ ಕಾರ್ಮಿಕರು ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸಿಐಟಿಯು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಕೇಂದ್ರ ಸರ್ಕಾರ 29 ಕಾರ್ಮಿಕ ನೀತಿಗಳನ್ನು ತಿದ್ದುಪಡಿ ಮಾಡಲು ಹೊರಟಿದೆ. ಕಾರ್ಮಿಕರ 22 ಬೇಡಿಕೆಗಳನ್ನು ಮುಂದಿಟ್ಟು ನಮ್ಮ ಹೋರಾಟ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಸಮಿತಿ ಖಜಾಂಚಿ ಎನ್.ಡಿ.ಕುಟ್ಟಪ್ಪ, ಕೆ.ಕೆ.ಹರಿದಾಸ್ ಹಾಜರಿದ್ದರು.