ಮಂಡ್ಯ: ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.3ರಿಂದ 7ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ತಿಳಿಸಿದರು.
ಮೊದಲ ದಿನ ಗ್ರಾಮ ಪಂಚಾಯಿತಿ ಕಾರ್ಮಿಕರು, 4ರಂದು ಅಕ್ಷರ ದಾಸೋಹ ಕಾರ್ಮಿಕರು, 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, 6ರಂದು ಅಸಂಘಟಿತ ಕಾರ್ಮಿಕರು ಮತ್ತು 7ರಂದು ಅಂಗನವಾಡಿ ಕಾಮಿರ್ಕರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಿಂದ 6000 ಹೆಚ್ಚಿನ ಕಾರ್ಮಿಕರು ಭಾಗವಹಿಸಲಿದ್ದು, ಒಟ್ಟಾರೆಯಾಗಿ 50 ಸಾವಿರ ಕಾರ್ಮಿಕರು ಧರಣಿಯಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸುವರು. ರಾಜ್ಯದ ಕಾರ್ಮಿಕರ ಬೇಡಿಕೆಗಳು ದೀರ್ಘಕಾಲದಿಂದ ಇತ್ಯರ್ಥವಾಗದೇ ಉಳಿದಿದ್ದು, ಶ್ರಮಿಕ ವರ್ಗ ಮಾರುಕಟ್ಟೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಎಂ.ಎಂ.ಶಿವಕುಮಾರ್, ಉಪಾಧ್ಯಕ್ಷೆ ಪ್ರಮೀಳಾಕುಮಾರಿ, ಕಾರ್ಯದರ್ಶಿಗಳಾದ ಎ.ಬಿ.ಶಶಿಕಲಾ, ಚಂದ್ರಶೇಖರ್ ಇದ್ದರು.