ಕೂಡ್ಲಿಗಿ ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಿದ್ದ ಕಸವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಳ್ಳುತ್ತಿರುವ ಪಪಂ ಪೌರ ಕಾರ್ಮಿಕರು. 
ಜಿಲ್ಲೆ

ಸ್ವಚ್ಛತೆಯಲ್ಲಿ ತೊಡಗಿದ ಪೌರ ಕಾರ್ಮಿಕರು

ರುದ್ರಪ್ಪ ವಾಲಿ

ಕೂಡ್ಲಿಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ನಾಲ್ಕೈದು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಹಿಂತೆಗೆದುಕೊಂಡ ಸ್ಥಳೀಯ ಪಪಂ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿ ಶನಿವಾರ ಕೆಲಸಕ್ಕೆ ಹಾಜರಾದರು.

ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರು, ಪಟ್ಟಣದಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಕಸವನ್ನು ಇಡೀ ದಿನ ಟ್ರ್ಯಾಕ್ಟರ್‌ಗಳಲ್ಲಿ ತುಂಬಿ ಸಾಗಿಸುವ ಕೆಲಸ ಮಾಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮದಕರಿ ವೃತ್ತದವರೆಗಿನ ಮುಖ್ಯ ರಸ್ತೆ, ಕೊಟ್ಟೂರು ರಸ್ತೆ, ಗುಡೇಕೋಟೆ ರಸ್ತೆ ಸೇರಿದಂತೆ ಪಟ್ಟಣದ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ ನಡೆಸಿ ಬಿದ್ದ ಕಸವನ್ನು ಸಾಗಿಸಿದರು.

ಇತ್ತ ಕಚೇರಿಯಲ್ಲಿನ ಸಿಬ್ಬಂದಿ ಕಚೇರಿ ಕೆಲಸ ಮಾಡುತ್ತಾ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ನಿರತರಾಗಿದ್ದ ಸಿಬ್ಬಂದಿ, ಸಾರ್ವಜನಿಕರು ಅಲೆದು ಸುಸ್ತಾಗಿದ್ದು ಮುಷ್ಕರ ಅಂತ್ಯವಾಗಿದ್ದು ಒಳ್ಳೆಯದೆ ಆಯ್ತು ಎಂದು ನಿಟ್ಟುಸಿರು ಬಿಟ್ಟು, ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಕಚೇರಿಯಿಂದ ಮನೆಗಳಿಗೆ ತೆರಳಿದರು.