ಜಿಲ್ಲೆ

ನಾಗರಿಕರೇ, ರಸ್ತೆಬದಿ ಕಸ ಬಿಸಾಡಬೇಡಿ: ಬಿಬಿಎಂಪಿ ಅಧಿಕಾರಿ ಆಯುಕ್ತೆ ಸ್ನೇಹಲ್

ಬೆಂಗಳೂರು: ನಗರದಲ್ಲಿ ಸೌಂದರ್ಯೀಕರಣ ಹೆಚ್ಚಿಸಬೇಕಾದರೆ ರಸ್ತೆಬದಿ ಕಸ ಬಿಸಾಡುವುದನ್ನು ನಿಲ್ಲಿಸಬೇಕು. ಈ ಶಿಸ್ತನ್ನು ಮೈಗೂಡಿಸಿಕೊಂಡಲ್ಲಿ ವಸತಿ ಪ್ರದೇಶ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಬಿಬಿಎಂಪಿ ಪೂರ್ವ ವಲಯದ ಆಯುಕ್ತೆ ಸ್ನೇಹಲ್ ಅಭಿಪ್ರಾಯಪಟ್ಟರು.

ಪೂರ್ವ ವಲಯದ ಡಾಲರ್ಸ್ ಕಾಲೊನಿ ವ್ಯಾಪ್ತಿಯಲ್ಲಿನ ಗೋಪಾಲ್ ರಾಮನಾರಾಯಣ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಹಿ ಸೇವಾ 2024 ಅಭಿಯಾನದ ಹಿನ್ನೆಲೆಯಲ್ಲಿ ಕಸ ಸುರಿಯುವ ಸ್ಥಳಗಳ (ಬಾಕ್ ಸ್ಪಾಟ್) ಸೌಂದರ್ಯೀಕರಣ ಹಾಗೂ ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಿದೆ. ಸಾಕಷ್ಟು ಮಂದಿ ಮನೆಗೆ ಬರುವ ಆಟೋ ಟಿಪ್ಪರ್‌ಗಳಿಗೆ ಕಸ ನೀಡದೆ ರಸ್ತೆಬದಿ ಬಿಸಾಡುತ್ತಿದ್ದಾರೆ. ಅದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಯಾರೂ ಕೂಡ ರಸ್ತೆಬದಿ ಕಸ ಬಿಸಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಅವರು ಮನವಿ ಮಾಡಿದರು.

ಚಿತ್ರಕಲಾ ಸ್ಪರ್ಧೆ ಆಯೋಜನೆ:

ಶಾಲಾ ಮಕ್ಕಳಿಗೆ ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 40 ಮಕ್ಕಳು ಭಾಗವಹಿಸಿದ್ದು, ವಿಜೇತರಾದ 15 ಮಂದಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯ ಜಂಟಿ ಆಯುಕ್ತೆ ಸರೋಜಾ, ದೆಹಲಿಯ ಮೊಹು ತಂಡ, ಪಾಲಿಕೆ ಸಿಬ್ಬಂದಿಗಳು, ಮಾರ್ಷಲ್​​ಗಳು, ಸ್ವಯಂಸೇವಕರು ಮತ್ತು ಮತ್ತಿತರರಿದ್ದರು.