ಜಿಲ್ಲೆ

ಹೊಸ ಬಸ್ ಮರಳಿಸಲು ನಾಗರಿಕರ ಆಗ್ರಹ

ರವಿ ಎಸ್. ಬಳೂಟಗಿ

ಶಿರಹಟ್ಟಿ: ಶಿರಹಟ್ಟಿ ಡಿಪೋಗೆ ಎರಡು ಹೊಸ ಬಸ್ ನೀಡಿ, ಮರುದಿನ ಮರಳಿ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ ನಾಗರಿಕರು ಪಟ್ಟಣದ ಡಿಪೋ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಪಪಂ ಸದಸ್ಯ ಫಕೀರೇಶ ರಟ್ಟಿಹಳ್ಳಿ, ಗೂಳಪ್ಪ ಕರಿಗಾರ, ನಾಗರಾಜ ಲಕ್ಕುಂಡಿ ಮಾತನಾಡಿ, ಪಟ್ಟಣದ ಡಿಪೋಗೆ ಸಾರಿಗೆ ಇಲಾಖೆ ಅಧಿಕಾರಿಗಳು ನೂರೆಂಟು ಕಾರಣ ಹೇಳುತ್ತ ಕೆಲವೇ ಬಸ್ ಮತ್ತು ಸಿಬ್ಬಂದಿ ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷೃದಿಂದ ಶಿರಹಟ್ಟಿ ಡಿಪೋ ಹೆಸರಿಗೆ ಮಾತ್ರ ಎಂಬಂತಾಗಿದೆ. ಎರಡು ಹೊಸ ಬಸ್ ಸಂಚಾರಕ್ಕೆ ಅನುಮತಿ ನೀಡಿ, ಮರುದಿನವೇ ಬಸ್ ಮರಳಿಸಲು ಸೂಚನೆ ನೀಡಿದ್ದರು ಸರಿಯಲ್ಲ. ಬಸ್ ಮರಳಿ ನೀಡುವ ತನಕ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಶಾಸಕರ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ವಿಭಾಗೀಯ ಸಂಚಾರ ಅಧಿಕಾರಿ ಬಸವಂತಪುರ ಮಾತನಾಡಿ, ಎರಡು ಹೊಸ ಬಸ್ ಮರಳಿ ನೀಡಲಾಗುತ್ತದೆ. ನಿಯಮಕ್ಕೆ ತಕ್ಕಂತೆ ಬಸ್ ಸಂಚಾರ ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಕಾಲಾವಕಾಶ ಬೇಕಿದೆ ಎಂದು ಮನವರಿಕೆ ಮಾಡಿದರು.

ಪಪಂ ಸದಸ್ಯ ಸಂದೀಪ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಯಲ್ಲಪ್ಪ ಇಂಗಳಗಿ, ಅಶೋಕ ವರವಿ, ಅಕ್ಬರ ಯಾದಗೀರ, ಗೂಳಪ್ಪ ಕರಿಗಾರ, ರಾಮು ಕಂಬಳಿ, ಮಂಜುನಾಥ ಸೊಂಟನೂರ, ಫಕೀರೇಶ ನಿಟ್ಟಾಲಿ, ಪರಶುರಾಮ ಡೊಂಕಬಳ್ಳಿ, ಸಂತೋಷ ಕುಬೇರ, ಫಕೀರೇಶ ವರವಿ, ಶಿವು ಕಲ್ಯಾಣಿ, ಮಲ್ಲೇಶ ಕಬಾಡಿ, ಮಹೇಶ ವರವಿ, ಫಕೀರೇಶ ಕರಿಗಾರ, ಗೌತಮ್ ಕಪ್ಪತ್ತನವರ, ಸಹಾಯಕ ಸಂಚಾರ ನಿರೀಕ್ಷಕ ಎ.ಎಂ. ದಂಡಿನ, ಡಿಪೋ ಪ್ರಭಾರ ವ್ಯವಸ್ಥಾಪಕಿ ಎಸ್.ಸಿ. ಕದಂಪೂರ ಇದ್ದರು.