ಹರಿಪ್ರಸಾದ್ ನಂದಳಿಕೆ ಶಿರ್ವ
ಹೊಂಡಗುಂಡಿಗಳಿಂದ ಕೂಡಿದ್ದ ರಸ್ತೆ, ಅಲ್ಲಲ್ಲಿ ಅಗೆದು ಹಾಕಿದ ರಸ್ತೆ ಬದಿ, ಬಾಗಿರುವ ಹುಲ್ಲು ಪೊದೆ ಹೀಗೆ ನಿತ್ಯ ವಾಹನ ಅಪಘಾತಕ್ಕೆ ಕಾರಣವಾಗುತ್ತಿದ್ದ ಬಂಟಕಲ್ಲು ಬಿ.ಸಿ ರೋಡ್ ಬಳಿ ಪಡುಬೆಳ್ಳೆ-ಮೂಡುಬೆಳ್ಳೆ ಸಂಪರ್ಕ ರಸ್ತೆಯನ್ನು ನಾಗರಿಕರು ಕಲ್ಲು ಮಣ್ಣು ಹಾಕಿ ಸರಿಪಡಿಸಿದರು.
ಶಿರ್ವ ಗ್ರಾಪಂ ವ್ಯಾಪ್ತಿಯ ಬಿ.ಸಿ ರೋಡ್‌ನಿಂದ ಪಾಂಬೂರು, ಪಡುಬೆಳ್ಳೆ-ಮೂಡುಬೆಳ್ಳೆ ಸಂಪರ್ಕಿಸುವ ಮುಖ್ಯ ರಸ್ತೆ ಹಲವು ವರ್ಷದಿಂದ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ನಿತ್ಯ ಕಿರಿಕಿರಿಯುಂಟು ಮಾಡುತ್ತಿತ್ತು. ಈ ಬಗ್ಗೆ ಜನತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಊರ ಯುವಕರ ತಂಡ ರಸ್ತೆ ಹೊಂಡ ಮುಚ್ಚುವ ಮೂಲಕ ವಾಹನದ ಓಡಾಟಕ್ಕೆ ಅನುಕೂಲತೆ ಒದಗಿಸಿದ್ದಾರೆ.
ಈ ರಸ್ತೆಯನ್ನು ನಿತ್ಯ ನೂರಾರು ವಾಹನಗಳು ಅವಲಂಬಿಸಿದ್ದು, ಉಡುಪಿ, ಮಣಿಪಾಲ, ಕುಂಜಾರುಗಿರಿ, ಕುಂತಳಾನಗರ, ಮೂಡುಬೆಳ್ಳೆ, ಪಡುಬೆಳ್ಳೆ ಹೀಗೆ ನಾನಾ ಪ್ರದೇಶ ಸಂಪರ್ಕಿಸಲು ಹತ್ತಿರದ ರಸ್ತೆಯಾದ ಪರಿಣಾಮ ಹೆಚ್ಚಿನ ವಾಹನ ಸವಾರರು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷದಿಂದ ರಸ್ತೆ ತೀರ ಹದಗೆಟ್ಟ ಪರಿಣಾಮ ವಾಹನ ಸವಾರರು ನಿತ್ಯ ನರಕಯಾತನೆ ಪಡುವಂತಾಗಿದೆ.
ಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳು, ಮಾನಸಾ ಮಕ್ಕಳ ಪುನರ್ವಸತಿ ಕೇಂದ್ರದ ಜಂಕ್ಷನ್‌ನಿಂದ ಪಡುಬೆಳ್ಳೆಗೆ ಹೋಗುವ ರಸ್ತೆಯಲ್ಲಿ ಇನ್ನೂ ಹಲವಾರು ಗುಂಡಿಗಳು ಜೀವಂತವಾಗಿದ್ದು, ಅಪಘಾತಕ್ಕೆ ಎಡೆಮಾಡಿಕೊಡುವಂತಿದೆ. ಬಿ.ಸಿ.ರೋಡ್‌ನಿಂದ ಪಾಂಬೂರು ಚರ್ಚ್ ನಡುವಿನ ಅರ್ಧ ಕಿ.ಮೀ.ರಸ್ತೆಗೆ ಇತ್ತೀಚೆಗೆ ಎರಡೂ ಬದಿಗಳಲ್ಲಿ ಡಾಂಬರಿನ ತೇಪೆ ಕಾರ್ಯ ನಡೆದಿದ್ದರೂ ಅದರ ಪಕ್ಕದಲ್ಲೇ ಇದ್ದ ರಸ್ತೆ ಗುಂಡಿ ಹಾಗೇ ಉಳಿದಿದೆ. ರಸ್ತೆಗೆ ತಾಗಿಕೊಂಡ ಗಿಡಗಂಟಿ ಪೊದೆಗಳ ತೆರವು ಕಾರ್ಯವೂ ನಡೆದಿಲ್ಲ. ಹೀಗಾಗಿ ತಿರುವಿನ ರಸ್ತೆಯಲ್ಲಿ ಅಪಘಾತಕ್ಕೆ ಕಾರಣವಾಗುತ್ತಿದ್ದು ಮೃತ್ಯುಗಳಾದ ನಿದರ್ಶನವೂ ಇದೆ.
ಅನೇಕ ಅಪಘಾತಗಳಿಗೆ ಕಾರಣವಾಗಿದ್ದ ಈ ರಸ್ತೆ ಹೊಂಡಗುಂಡಿ ಹಾಗೂ ತಿರುವಿನಲ್ಲಿದ್ದ ಗಿಡಗಂಟಿಗಳನ್ನು ಬಂಟಕಲ್ಲು ನಾಗರಿಕ ಸಮಿತಿ ಸದಸ್ಯರು ಜತೆಯಾಗಿ ತೆರವುಗೊಳಿಸಿ, ಶ್ರಮದಾನದ ಮೂಲಕ ಹೊಂಡಗುಂಡಿ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಶ್ರಮದಾನದಲ್ಲಿ ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್, ಪದಾಧಿಕಾರಿಗಳಾದ ಉಮೇಶ್ ರಾವ್, ವಿನ್ಸೆಂಟ್ ಕ್ಯಾಸ್ತಲಿನೊ, ಡೇನಿಸ್ ಡಿಸೋಜ, ವಾಲೆಟ್ ಕ್ಯಾಸ್ತಲಿನೊ, ಸ್ಥಳೀಯರಾದ ಸುಂದರ ಶೆಟ್ಟಿ, ಶಂಕರ ಶೆಟ್ಟಿ ಪಾಲ್ಗೊಂಡಿದ್ದರು.
ಇಲ್ಲಿನ ತಿರುವು ರಸ್ತೆಯಲ್ಲಿ ಪೊದೆಗಳಿಂದ ವಾಹನ ಎದುರು ಬದುರುಗೊಳ್ಳುವ ಸಂದರ್ಭದಲ್ಲಿ ಅಪಘಾತಕ್ಕೆ ಕಾರಣವಾಗಿತ್ತು. ಇದೀಗ ಆಧಿಕಾರಿಗಳು ಅಥವಾ ಇಲಾಖೆಯನ್ನು ಕಾಯದೆ ನಾಗರಿಕ ಸಮಿತಿಯಿಂದ ರಸ್ತೆಯ ಹೊಂಡಮುಚ್ಚುವ ಕಾರ್ಯ ನಡೆದಿರುವುದು ನಿಜಕ್ಕೂ ಶ್ಲಾಘನೀಯ. -ಡೇನಿಸ್ ಡಿಸೋಜ ಬಂಟಕಲ್ಲು ಬಿ.ಸಿ.ರೋಡ್ ರಿಕ್ಷಾ ಯೂನಿಯನ್ ಮಾಜಿ ಅಧ್ಯಕ್ಷ ಅನೇಕ ಅಫಘಾತಗಳಿಗೆ ಕಾರಣವಾಗಿದ್ದ ರಸ್ತೆಯಲ್ಲಿ ಇತ್ತೀಚೆಗೆ ಬೈಕ್ ಸವಾರರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ತಿರುವು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರು. ಶಾಲೆ, ಚರ್ಚ್‌ಗೆ ಹೋಗಿ ಬರುವ ವಿದ್ಯಾರ್ಥಿಗಳು, ಅನೇಕ ವಾಹನಗಳು ಈ ಮಾರ್ಗದಿಂದಲೇ ಸಂಚರಿಸುತ್ತವೆ. ಇದರ ದುರಸ್ತಿ ಅಗತ್ಯತೆ ಮನಗೊಂಡು ಬಂಟಕಲ್ಲು ನಾಗರಿಕ ಸೇವಾ ಸಮಿತಿ ಈ ಕಾರ್ಯ ನಡೆಸಿದೆ. -ಕೆ.ಆರ್.ಪಾಟ್ಕ ನಾಗರಿಕ ಸಮಿತಿ ಬಂಟಕಲ್ಲು ಅಧ್ಯಕ್ಷ https://www.vijayavani.net/literature-tour-series-at-balkudru-school https://www.vijayavani.net/mudarangadi-grama-jan-sampraka-sabha