ಜಿಲ್ಲೆ

ಭಟ್ಕಳಕ್ಕೆ ಸಿಐಎಸ್‌ಎಫ್ ತಂಡ ಭೇಟಿ

ವೀರೇಶ ಸೌದ್ರಿ

ಭಟ್ಕಳ: ಲೋಕಸಭೆ ಚುನಾವಣೆ ನಿಮಿತ್ತ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಪಟ್ಟಣಕ್ಕೆ ಸಿಐಎಸ್‌ಎಫ್ ತಂಡ ಸೋಮವಾರ ಆಗಮಿಸಿದೆ.

ಚುನಾವಣೆಗೆ ಸಂಬಂಧಿಸಿದಂತೆ ಪ್ರದೇಶದ ಭದ್ರತೆ, ಚೆಕ್‌ಪೋಸ್ಟ್ ಕರ್ತವ್ಯ, ಸ್ಟ್ರಾಂಗ್‌ರೂಂ ಭದ್ರತೆ ಕರ್ತವ್ಯ, ಪ್ರಮುಖ ಸ್ಥಳಗಳಲ್ಲಿ ಪಥ ಸಂಚಲನ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸ್ಥಳೀಯ ಪೊಲೀಸರಿಗೆ ಸಹಕರಿಸಲಿದೆ.

ತಂಡವು ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಬಂದರು, ತಲಗೋಡ ಹಾಗೂ ಶಿರಾಲಿ ಪ್ರದೇಶದಲ್ಲಿ ಪಥ ಸಂಚಲನ ನಡೆಸಿದೆ. ಸಿಐಎಸ್‌ಎಫ್‌ನ 90ಜನರ ತಂಡವು ಕಮಾಂಡೆಂಟ್ ಜಿತೇಂದ್ರ ಚವಾಣ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಭಟ್ಕಳ ಗ್ರಾಮೀಣ ಠಾಣಾ ಪಿಐ ಚಂದನ ಗೋಪಾಲ, ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ಇತರರು ಇದ್ದರು.