ಜಿಲ್ಲೆ

ಠಾಣೆಗೇ ಬಂದಿತ್ತು ಎಸ್​ಪಿ ಕಾರು: ಸರ್ಕಲ್ ಇನ್​ಸ್ಪೆಕ್ಟರ್​ಗೂ ಮುಳುವಾಯ್ತು ಎಸ್​ಐ ದರ್ಬಾರು...

Webdesk - Ravikanth

ತುಮಕೂರು: ಆರೋಪಿಯನ್ನು ಬಂಧಿಸಲು ಕಾರು ತೆಗೆದುಕೊಂಡು ಬಾ ಎಂದು ದೂರುದಾರನಿಗೇ ದಬಾಯಿಸಿದ್ದ ಸಬ್​​ ಇನ್​ಸ್ಟೆಕ್ಟರ್ ದರ್ಬಾರು ಇದೀಗ ಸರ್ಕಲ್​ ಇನ್​​ಸ್ಪೆಕ್ಟರ್​ಗೂ ಮುಳುವಾಗಿದೆ.

ಆರೋಪಿಯ ಬಂಧನಕ್ಕೆ ಕೋರಿ ತುಮಕೂರು ಜಿಲ್ಲೆ ದಂಡಿನಶಿವರ ಠಾಣೆಗೆ ಬಂದಿದ್ದ ದೂರುದಾರ ನಾಗೇಂದ್ರಪ್ಪಗೆ, 'ಆರೋಪಿಯನ್ನು ಬಂಧಿಸಬೇಕಿದ್ದರೆ ಬಾಡಿಗೆ ಕಾರು ತೆಗೆದುಕೊಂಡು ಬಾ' ಎಂದು ಸಬ್​ ಇನ್​ಸ್ಪೆಕ್ಟರ್ ಶಿವಲಿಂಗಯ್ಯ ದಬಾಯಿಸಿ ಸತಾಯಿಸಿದ್ದರು.

ಇದರಿಂದ ಬೇಸತ್ತಿದ್ದ ನಾಗೇಂದ್ರಪ್ಪ ಜ. 13ರಂದು ಸೀದಾ ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ಅವರಲ್ಲಿಗೇ ತೆರಳಿ ಅಹವಾಲು ಹೇಳಿಕೊಂಡಿದ್ದರು. ಆಗ ಎಸ್​ಪಿ ತಮ್ಮ ಕಾರನ್ನೇ ಕೊಟ್ಟು ದೂರುದಾರರನ್ನು ಆ ಕಾರಿನಲ್ಲಿ ಠಾಣೆಗೆ ಕಳುಹಿಸಿದ್ದಲ್ಲದೆ, ಆರೋಪಿಯನ್ನು ಬಂಧಿಸುವಂತೆ ಎಸ್​ಐಗೆ ಕರೆ ಮಾಡಿ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದರು.

ಈಗ ಅದೇ ಪ್ರಕರಣ ತುರುವೇಕೆರೆ ಸರ್ಕಲ್​ ಇನ್​ಸ್ಪೆಕ್ಟರ್ ನವೀನ್​​ಗೂ ಮುಳುವಾಗಿದೆ. ಪ್ರಕರಣ ಸಂಬಂಧ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನವೀನ್​ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.