ಮಂಡ್ಯ: ಕೇಂದ್ರ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಅನುಮೋದನೆಯೊಂದಿಗೆ ನಡೆಯುತ್ತಿರುವ ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ(ಸಿಪೆಟ್) ಮೂರು ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕಿ(ತಾಂತ್ರಿಕ) ಭಾರತಿ ತಿಳಿಸಿದರು.
ಈ ಕೋರ್ಸ್‌ಗಳನ್ನು ಒಳಗೊಂಡಿರುವುದು ದೇಶದಲ್ಲಿ 40 ಹಾಗೂ ರಾಜ್ಯದಲ್ಲಿ ಒಂದು ಸಂಸ್ಥೆಯಲ್ಲಿ ಮಾತ್ರ. ಕೌಶಲ ಮತ್ತು ತಾಂತ್ರಿ ತರಬೇತಿ ಸಂಸ್ಥೆಯ(ಸಿಎಸ್‌ಟಿಎಸ್) ಸಹಕಾರದೊಂದಿಗೆ ಸಿಪೆಟ್ ಕೋರ್ಸ್‌ಗಳನ್ನು ನಡೆಸುತ್ತಿದೆ. 60 ಸೀಟುಗಳಿಗೆ ಪ್ರವೇಶಾವಕಾಶವಿದೆ. ಇನ್ನು ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರಿಗೆ ಉದ್ಯೋಗ ಖಚಿತ. ವಿದೇಶಗಳಲ್ಲೂ ಉದ್ಯೋಗಾವಕಾಶವಿದೆ. ಉನ್ನತ ವ್ಯಾಸಂಗ ಮತ್ತು ಕೈಗಾರಿಕೆ ಸ್ಥಾಪನೆಗೂ ಅವಕಾಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರುವವರು ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ(ಡಿಪಿಎಂಟಿ) ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ(ಡಿಪಿಟಿ) ಕೋರ್ಸ್ ಮಾಡಬಹುದು. ಇದಲ್ಲದೆ ಬಿಎಸ್ಸಿ ಪದವೀಧರರು ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಪ್ರೊಸೆಸಿಂಗ್ ಆ್ಯಂಡ್ ಟೆಸ್ಟಿಂಗ್ ಸ್ನಾತಕೋತ್ತರ ಕೋರ್ಸ್ ಮಾಡಬಹುದು. ಪ್ರಸ್ತುತ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬಹಳ ಬೇಡಿಕೆಯಿದೆ. ಪ್ರತಿನಿತ್ಯ ಒಬ್ಬ ಮನುಷ್ಯ ವಿವಿಧ ರೀತಿಯಲ್ಲಿ 15 ಕಿ.ಲೋ ಪ್ಲಾಸ್ಟಿಕ್ ಬಳಸುತ್ತಿದ್ದಾನೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಹತ್ತು ವರ್ಷಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಪ್ರಮಾಣ 30 ಕಿ.ಲೋ ತಲುಪುವ ಸಾಧ್ಯತೆಯಿದೆ. ಆದ್ದರಿಂದ ಪ್ಲಾಸ್ಟಿಕ್ ಟೆಕ್ನಾಲಜಿಗೆ ಹೆಚ್ಚು ಬೇಡಿಕೆಯಿದೆ ಎಂದು ವಿವರಿಸಿದರು.
ಸಿಪೆಟ್‌ನ ಕರ್ನಾಟಕದ ವಿದ್ಯಾರ್ಥಿಗಳು ಪೆಟ್ರೋಕೆಮಿಕಲ್ಸ್/ಪ್ಲಾಸ್ಟಿಕ್/ಪಾಲಿಮರ್ ಸಂಬಂಧಿತ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲದ ಬೇಡಿಕೆಗಾಗಿ ಜಾಗತಿವಾಗಿ ಗುರುತಿಸಲ್ಪಟ್ಟಿದ್ದಾರೆ. ಹಾಗೆಯೇ ಸಿಪೆಟ್ ಒಂದು ಲಕ್ಷಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವೃತ್ತಿಪರರ ಬಲವಾದ ಅಲ್ಯೂಮಿನಿ ಬೇಸ್ ಅನ್ನು ಹೊಂದಿದೆ. ಇನ್ನು ನಮ್ಮಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಲ ಸೌಲಭ್ಯ, ಹಾಸ್ಟೆಲ್ ಸೌಲಭ್ಯ ದೊರೆಯಲಿದೆ. ಇದಲ್ಲದೆ ಸ್ಟೈಫಂಡ್‌ನೊಂದಿಗೆ ಇಂಟರ್ನ್‌ಶಿಪ್ ಮಾಡಬಹುದು. ಕ್ಯಾಂಪಸ್‌ನಲ್ಲಿ ಉಚಿತ ವೈ-ಫೈ ಮತ್ತು ವಿದ್ಯಾರ್ಥಿಗಳ ಕ್ಲಬ್ ಸೌಲಭ್ಯವಿದೆ. ಸಿಪೆಟ್ ಪ್ರವೇಶಾತಿ ಪರೀಕ್ಷೆ ಅರ್ಜಿ ಸಲ್ಲಿಸಲು ಮೇ.28 ಕಡೆಯ ದಿನ. ಜೂ.11ರಂದು ಪರೀಕ್ಷೆ ನಡೆಯಲಿದೆ. ಆಗಸ್ಟ್ ಮೊದಲ ವಾರದಲ್ಲಿ ತರಗತಿಗಳು ಆರಂಭವಾಗಲಿವೆ ಎಂದು ಹೇಳಿದರು.
ಸಿಪೆಟ್‌ನ ಸಹಾಯಕ ಬಿ.ರಾಚಯ್ಯ, ಕರುನಾಡ ಸೇವಕರು ಸಂಘಟನೆಯ ಪದಾಧಿಕಾರಿಗಳಾದ ಎಂ.ಬಿ.ನಾಗಣ್ಣಗೌಡ, ಚಂದ್ರು ಹಾಜರಿದ್ದರು.