ಜಿಲ್ಲೆ

ಸಿನಿಮಾ ಒಂದು ನೋಡುವ ಪುಸ್ತಕ ಇದ್ದಂತೆ: ಟಿ.ಎಸ್​.ನಾಗಾಭರಣ ಅಭಿಮತ

ಬೆಂಗಳೂರು: ಸಿನಿಮಾ ಎಂಬುದು ನೋಡುವ ಪುಸ್ತಕ ಇದ್ದಂತೆ ಎಂದು ನಿರ್ದೇಶಕ ಡಾ.ಟಿ.ಎಸ್​.ನಾಗಾಭರಣ ಅಭಿಪ್ರಾಯಪಟ್ಟರು.

ಸ್ನೇಹ ಬುಕ್​ ಹೌಸ್​ ಭಾನುವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ವಿರಾಟ್​ ಪದ್ಮನಾಭ ಬರೆದಿರುವ " ಬೆಟ್ಟದ ಹೂವು' ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಚಿತ್ರರಂಗದಲ್ಲಿ ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಬಗೆಯ ಸಿನಿಮಾಗಳಿವೆ. ಒಳ್ಳೆಯ ಸಿನಿಮಾ ನಮ್ಮ ಹೃದಯವನ್ನು ಮೀಟಿ ನೆನಪಿನಲ್ಲಿ ಸದಾ ಉಳಿಯುವಂತೆ ಮಾಡುತ್ತದೆ. ಕಾಲತೀತವಾದರೂ ಅಚ್ಚಹಳಿಯದೆ ಉಳಿಯಲಿವೆ. ಆದರೆ, ಕೆಟ್ಟ ಸಿನಿಮಾವು ನೋಡಲಾಗದ ದೃಶ್ಯಗಳನ್ನು ನಮಗೆ ತೋರಿಸುತ್ತೇವೆ. ಕನ್ನಡ ಚಿತ್ರರಂಗಕ್ಕೆ ಕೆಲ ನಿರ್ದೇಶಕರು ಅದ್ಭುತವಾದ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಹಿಂದಿನ ಕಾಲಘಟ್ಟದಲ್ಲಿ ಒಳ್ಳೆಯ ಕಥೆ ಆಧಾರಿಸಿ ಚಿತ್ರಗಳು ಬರುತ್ತಿದ್ದವು ಎಂದರು.

ಸಿನಿಮಾ ಯಶಸ್ಸು ಗಳಿಸದಿದ್ದರೆ ಅದಕ್ಕೆ ನಿರ್ದೇಶಕರನ್ನೇ ಹೊಣೆ ಮಾಡುತ್ತಾರೆ. ಮುಂದಿನ ಚಿತ್ರವನ್ನು ನಿರ್ದೇಶಿಸಲು ಆ ನಿರ್ದೇಶಕನಿಗೆ ಅವಕಾಶವೇ ಸಿಗೋದಿಲ್ಲ. ಅಂಥ ಪರಿಸ್ಥಿತಿಯಲ್ಲಿ ಕೆಲ ನಿರ್ದೇಶಕರು ಇದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಮರೆಯುತ್ತಿರುವ ಕಾಲಟ್ಟದಲ್ಲಿ ಇತಿಹಾಸದ ಜೊತೆಗೆ ಅದ್ಭುತವಾದ ಚಿತ್ರಗಳನ್ನು ನೀಡಿರುವ ನಿರ್ದೇಶಕರನ್ನು ತಿಳಿಸುವ, ಎಲ್ಲ ಸಿದ್ಧಾಂತ ಮತ್ತು ರೂಪಕಗಳನ್ನು ನೆನಪಿಸುವ ಕೆಲಸವನ್ನು "ಬೆಟ್ಟದ ಹೂವು' ಪುಸ್ತಕ ಮಾಡಿದೆ ಎಂದು ನಾಗಾಭರಣ ಮೆಚ್ಚುಗೆ ವ್ಯಕ್ತಪಡಿಸಿದರು. ವಕೀಲ ಪಿ.ಎಂ.ವಿರೇಂದ್ರ, ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ, ಹಿರಿಯ ಪತ್ರಕರ್ತ ಸುಭಾಶ್​ ಹೂಗಾರ್​ ಸೇರಿ ಮತ್ತಿತರರಿದ್ದರು.

ನನ್ನ ವಿದ್ಯಾರ್ಥಿಗಳಿಗೆ "ಬೆಟ್ಟದ ಹೂವು' ಕೃತಿಯನ್ನು ಅರ್ಪಿಸುತ್ತೇನೆ. ವಿದ್ಯಾರ್ಥಿಗಳೇ ನನ್ನ ಶಕ್ತಿ. ಪುಸ್ತಕ ರಚಿಸಲು ತರಗತಿಗಳ ಪರಿಕಲ್ಪನೆಯೇ ಪ್ರೇರಣೆ ಕೊಟ್ಟಿದೆ. ಕೃತಿ ರೂಪುಗೊಳ್ಳುವ ಹಿಂದೆ ಹಲವು ಪ್ರಸಿದ್ಧ ಲೇಖಕರ ಪ್ರಭಾವವೂ ಇದೆ.

| ವಿರಾಟ್​ ಪದ್ಮನಾಭ. ಸಹಾಯಕ ಪ್ರಾಧ್ಯಾಪಕ.