ಜಿಲ್ಲೆ

ಬಾಲಕಿ ಹತ್ಯೆ ತನಿಖೆಗೆ ಆಗಮಿಸಿದ ಸಿಐಡಿ ತಂಡ

ಹುಬ್ಬಳ್ಳಿ: ಬಾಲಕಿ ಹತ್ಯಾಚಾರ ಪ್ರಕರಣದ ತನಿಖೆ ನಡೆಸಲು ಬೆಂಗಳೂರಿನಿಂದ ಸಿಐಡಿ ತಂಡ ನಗರಕ್ಕೆ ಮಂಗಳವಾರ ಆಗಮಿಸಿದೆ.

ಸಿಐಡಿ ಎಸ್‌ಪಿ ಪಿ. ವೆಂಕಟೇಶ, ಡಿವೈಎಸ್‌ಪಿ ಪುನೀತಕುಮಾರ ಆರ್., ಇನ್‌ಸ್ಪೆಕ್ಟರ್ ಮಂಜುನಾಥ ಆರ್. ಅವರ ಒಳಗೊಂಡ ತಂಡ, ಕೆಎಂಸಿಆರ್‌ಐ, ಶವಾಗಾರ, ಬಾಲಕಿಯ ಹತ್ಯೆ ನಡೆದ ಸ್ಥಳ ಸೇರಿ ಇತರ ಪ್ರದೇಶಕ್ಕೆ ಭೇಟಿ ನೀಡಿತು. ನಂತರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ನಾಳೆ ಅಥವಾ ನಾಡಿದ್ದು ಸಂಪೂರ್ಣವಾದ ತನಿಖೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮರಣೋತ್ತರ ಪರೀಕ್ಷೆ: ಬಾಲಕಿ ಕೊಲೆ ಮಾಡಿ ಎನ್‌ಕೌಂಟರ್‌ನಲ್ಲಿ ಬಲಿಯಾಗಿರುವ ಬಿಹಾರದ ರಿತೇಶ ಕುಮಾರನ ಮರಣೋತ್ತರ ಪರೀಕ್ಷೆ ಕೆಎಂಸಿಆರ್‌ಐ ಶವಾಗಾರದಲ್ಲಿ ನಡೆಯಿತು. ಸಿಐಡಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಮರಣೋತ್ತರ ಪರೀಕ್ಷೆಯನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗಿದೆ.

ಮೃತ ದೇಹವನ್ನು ಸಂರಕ್ಷಿಸಿಡಲು ನಿರ್ಧಾರ ಮಾಡಲಾಗಿದೆ. ಯಾಕೆಂದರೆ ರಿತೇಶಕುಮಾರ ಅವರ ಸಂಬಂಧಿಕರು ಯಾರೂ ಬಂದಿಲ್ಲ. ಹಾಗಾಗಿ ಕೆಲ ದಿನಗಳವರೆಗೆ ಶವ ಸಂರಕ್ಷಿಸಿಟ್ಟು, ನಂತರ ಮಣ್ಣು ಮಾಡುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಪಂಚರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಾದಕ ವಸ್ತು ಸೇವಿಸಿದ್ದರ ಕುರಿತು ವರದಿ ಹೇಳುವುದು ಬಾಕಿ ಇದೆ. ಸೋಮವಾರ ರಾತ್ರಿ ನ್ಯಾಯಾಧೀಶರ ಸಮ್ಮುಖದಲ್ಲಿ ರಿತೇಶಕುಮಾರ ಶವದ ಪಂಚನಾಮೆ ಪ್ರಕ್ರಿಯೆ ನಡೆದಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸುಪ್ರೀಂಕೋರ್ಟ್ ನಿರ್ದೇಶದನ್ವಯ ವಿವರವಾದ ಮಾಹಿತಿ ಸಂಗ್ರಹಿಸಲಾಗಿದೆ. ರಿತೇಶಕುಮಾರ ಮರಣೋತ್ತರ ಪರೀಕ್ಷೆ ಆಗಿದೆ. ನಮ್ಮ ಪೊಲೀಸರಿಂದ ಪರಿಚಯಸ್ಥರ ಹುಡುಕಾಟ ಮಾಡುತ್ತಿದ್ದೇವೆ. 3-4 ತಿಂಗಳು ಬಿಟ್ಟು ಸಂಬಂಧಿಕರು ಬಂದರೆ, ಅವರ ಗಮನಕ್ಕೆ ತರಬೇಕಾಗುತ್ತದೆ. ಸುಪ್ರೀಂಕೋರ್ಟ್ ಆದೇಶವನ್ನು ಯಥಾವತ್ತಾಗಿ ಲೋಪವಿಲ್ಲದೇ ಪಾಲನೆ ಮಾಡಲಾಗುತ್ತಿದೆ. ಶವವನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಆಗುವುದಿಲ್ಲ ಎಂದಾಗ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಫೈರಿಂಗ್ ವಿಷಯವಾಗಿ ತನಿಖೆ ನಡೆಸಲು ನಮ್ಮ ಇಲಾಖೆಯ ಮುಖ್ಯ ಕಚೇರಿಯಿಂದ ಸಿಐಡಿ ತಂಡ ಬಂದಿದೆ. ಅಧಿಕಾರಿಗಳು ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.