ತನಿಖೆಯಲ್ಲಿ ಸತ್ಯಾಂಶವಿಲ್ಲ ಎಂದ ಸಿಐಡಿ
ವಿಜಯವಾಣಿ ಸುದ್ದಿಜಾಲ ಯಾದಗಿರಿ
ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಇಲ್ಲಿನ ನಗರಠಾಣೆ ಪಿಎಸ್‌ಐ ಆಗಿದ್ದ ದಿ.ಪರಶುರಾಮ್ ಸಾವಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮತ್ತು ಅವರ ಪುತ್ರ ಪಂಪಣ್ಣಗೌಡ ಪಾಟೀಲ್ ಕಾರಣ ಎಂದು ಆರೋಪಿಸಿ ಅವರ ಪತ್ನಿ ಶ್ವೇತಾ ನೀಡಿದ ದೂರಿನಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ನಡೆಸುತ್ತಿರುವ ಸಿಐಡಿ ಬಿ.ರಿಪೋರ್ಟ್ ಸಲ್ಲಿಸಲು ಮುಂದಾಗಿದೆ.
ಈ ಕುರಿತು ಮೃತ ಪರಶುರಾಮ್ ಅವರ ಪತ್ನಿಗೆ ನೋಟಿಸ್ ಮೂಲಕ ಮಾಹಿತಿ ನೀಡಿರುವ ಸಿಐಡಿ ಡಿವೈಎಸ್‌ಪಿ, ಈ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ನಡೆಸಿದಾಗ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಗೊತ್ತಾಗಿದ್ದರಿಂದ ಬಿ.ರಿಪೋರ್ಟ್ನ್ನು ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ಶಾಸಕ ಚನ್ನಾರಡ್ಡಿ ಪಾಟೀಲ್ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸುವ ನಿರ್ಧಾರಕ್ಕೆ ಸಿಐಡಿ ಬಂದಿದೆ.
ಕಳೆದ ಸುಮಾರು ೯ ತಿಂಗಳ ಹಿಂದೆ ಪರಶುರಾಮ್ ಅವರನ್ನು ನಗರ ಠಾಣೆಯಿಂದ ಸೈಬರ್ ಕ್ರೆÊಂ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಅದೇ ಹುದ್ದೆಯಲ್ಲಿ ಮುಂದುವರೆಯಲು ಶಾಸಕರು ಮತ್ತು ಅವರ ಅವರ ಪುತ್ರ ೩೦ ಲಕ್ಷ ರೂ.ಬೇಡಿಕೆ ಇಟ್ಟಿದ್ದರಿಂದ ಮಾನಸಿಕವಾಗಿ ನೊಂದಿದ್ದ ಪರಶುರಾಮ್ ಅದೇ ಒತ್ತಡದಲ್ಲಿ ಕಳೆದ ೨೦೨೪ ಆ.೨ರಂದು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಶ್ವೇತಾ ಅವರು ಪೊಲೀಸರಿಗೆ ದೂರು ನೀಡಿದ್ದರು.
ಇದರಿಂದ ಭಾರಿ ಮುಜುಗರಕ್ಕೆ ಈಡಾದ ರಾಜ್ಯದ ಕಾಂಗ್ರೆಸ್ ಸರ್ಕಾರ ಆಗ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಶಾಸಕರ ರಾಜೀನಾಮೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಇಡೀ ದಿನ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದವು. ಪ್ರತಿಪಕ್ಷ ಬಿಜೆಪಿ ಕೂಡ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಶಾಸಕರ ರಾಜೀನಾಮೆ ಆಗ್ರಹಿಸಿದ್ದವು.
ಮೃತ ಪರುಶುರಾಮ್ ಕೊಪ್ಪಳ್ಳ ಜಿಲ್ಲೆಯವರಾದರೇ, ಅವರ ಪತ್ನಿ ಶ್ವೇತಾ ರಾಯಚೂರುನವರಾಗಿದ್ದಾರೆ. ಪಿಎಸ್‌ಐ ನಿಧನರಾದಾಗ ಅವರ ಪತ್ನಿ ಶ್ವೇತಾ ತುಂಬು ಗರ್ಭಿಣಿಯಾಗಿದ್ದರು. ಸುಮಾರು ಒಂದು ವಾರದವರೆಗೂ ಈ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.