ಜಿಲ್ಲೆ

ಎಡಿಜಿಪಿ ಅಮೃತ್ ಪೌಲ್​ಗೆ ಸಿಐಡಿ ಡ್ರಿಲ್!

Webdesk - Ravikanth

ಬೆಂಗಳೂರು: ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ಅಕ್ರಮ ನೇಮಕಾತಿ ಉರುಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುತ್ತಿಕೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ. ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಸಿಐಡಿ ಅಧಿಕಾರಿಗಳೀಗ ನೇಮಕಾತಿ ವಿಭಾಗದ ಹಿಂದಿನ ಮುಖ್ಯಸ್ಥ ಎಡಿಜಿಪಿ ಅಮೃತ್ ಪೌಲ್ ವಿಚಾರಣೆ ನಡೆಸಿದ್ದಾರೆ. ಅವರ ವಿರುದ್ಧ ಸಾಕ್ಷ್ಯ ಸಿಕ್ಕರೆ ಬಂಧಿಸುವ ಸಾಧ್ಯತೆ ಇದೆ. ಎಸ್​ಐ ನೇಮಕಾತಿಯಲ್ಲಿ ಅಕ್ರಮ ಬೆಳಕಿಗೆ ಬಂದ ಬಂದ ಬೆನ್ನಲ್ಲೇ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್​ರನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್​ಡಿ) ಎಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಚಾರಣೆ ನಡೆಸಿ, ಹೇಳಿಕೆ ಪಡೆಯುವ ಉದ್ದೇಶದಿಂದ ವಿಚಾರಣೆಗೆ ಬರುವಂತೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು ಎನ್ನಲಾಗಿದೆ.

ಬೆಂಗಳೂರಿನ ಅರಮನೆ ರಸ್ತೆ ಕಾರ್ಲಟನ್ ಹೌಸ್​ನಲ್ಲಿರುವ ಸಿಐಡಿ ತನಿಖಾಧಿಕಾರಿ ಗಳ ಮುಂದೆ ಪೌಲ್ ಹಾಜರಾಗಿದ್ದರು. ಐಪಿಎಸ್ ದರ್ಜೆ ತನಿಖಾಧಿಕಾರಿ ಯೊಬ್ಬರು ಬುಧವಾರ ಮತ್ತು ಗುರುವಾರ ಅಮೃತ್ ಪೌಲ್ ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ವಿಚಾರಣೆ ವೇಳೆ ಅಮೃತ್ ಪೌಲ್ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಕೇಂದ್ರ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದ್ದೇನೆ. ಕೆಳ ಹಂತದ ಅಧಿಕಾರಿ ಮತ್ತು ಸಿಬ್ಬಂದಿ ಅಕ್ರಮ ಎಸಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಾಗಿಲ್ಲ ಎಂದಷ್ಟೇ ಉತ್ತರ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಎಡಿಜಿಪಿಗೆ ಕೇಳಿದ ಪ್ರಶ್ನೆಗಳೇನು?: ಬೆಂಗಳೂರು ನಗರ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ಸಿಐಡಿ ಆವರಣದ ಪೊಲೀಸ್ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ಲ್ಲಿ ಸಂಗ್ರಹ ಮಾಡಲಾಗಿತ್ತು. ಇದರ ಉಸ್ತುವಾರಿಯನ್ನು ಬಂಧಿತ ಪೊಲೀಸರೇ ವಹಿಸಿದ್ದರು. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು 150 ಅಂಕಗಳ 2ನೇ ಪತ್ರಿಕೆಯ ಒಎಂಆರ್ ಶೀಟ್​ನಲ್ಲಿ 15 ರಿಂದ 20 ಪ್ರಶ್ನೆಗಳಿಗೆ ಉತ್ತರಿಸಿ ಉಳಿದವನ್ನು ಖಾಲಿ ಬಿಡುತ್ತಿದ್ದರು. ಮೊದಲೇ ರೂಪಿಸಿದ್ದ ಯೋಜನೆಯಂತೆ ರಾತ್ರೋರಾತ್ರಿ 120ಕ್ಕಿಂತ ಹೆಚ್ಚಿನ ಅಂಕ ಬರುವಂತೆ ತಿದ್ದಿ ಎಸ್​ಐ ಹುದ್ದೆಗೆ ಆಯ್ಕೆ ಆಗುವಂತೆ ಮಾಡಿದ್ದಾರೆ. 50 ಅಂಕಗಳ ಮೊದಲ ಪತ್ರಿಕೆಯಲ್ಲಿ 20 ರಿಂದ 25 ಅಂಕ ಪಡೆದವರು, 2ನೇ ಪತ್ರಿಕೆಯಲ್ಲಿ ಅಧಿಕ ಅಂಕಗಳಿಸಿ ರ್ಯಾಂಕ್ ಬರುವಂತೆ ಮಾಡಿದ್ದರು. ಈ ಎಲ್ಲ ಅಕ್ರಮಗಳು ಕೇಂದ್ರ ಕಚೇರಿಯಲ್ಲೇ ನಡೆದಿವೆ. ಜತೆಗೆ ಲಿಖಿತ ಪರೀಕ್ಷೆ ಬರೆಯಲು ಅಕ್ರಮದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ಅವರಿಗೆ ಬೇಕಾದ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಬರೆಸಿದ್ದರು. ಈ ಎಲ್ಲ ಅವ್ಯವಹಾರಗಳ ಬಗ್ಗೆ ಎಡಿಜಿಪಿಯನ್ನು ಸಿಐಡಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಿಬಿಐ, ಇಡಿಯಿಂದ ತನಿಖೆ?: ರಾಜ್ಯ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅವ್ಯವಹಾರದ ಬಗ್ಗೆ ಬಲವಾದ ಸಾಕ್ಷ್ಯ ಲಭ್ಯವಾದರೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಗಳಿವೆ. ಐಪಿಎಸ್ ಅಧಿಕಾರಿ ಬಂಧನಕ್ಕೆ ಒಳಗಾದರೆ, ಇದೇ ಮೊದಲು ಎನ್ನಲಾಗಿದೆ. ಭಾರತೀಯ ಪೊಲೀಸ್ ಸೇವೆಯಲ್ಲಿರುವ ಅಧಿಕಾರಿ ಬಂಧನಕ್ಕೆ ಒಳಗಾದರೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಶುರು ಮಾಡಲಿವೆ.

ಒಬ್ಬೊಬ್ಬರಾಗಿ ಸಿಐಡಿ ಬಲೆಗೆ ಬಿದ್ದರು: 545 ಎಸ್​ಐ ನೇಮಕಾತಿ ಅಮೃತ್ ಪೌಲ್ ನೇತೃತ್ವದಲ್ಲಿಯೇ ನಡೆದಿತ್ತು. 2021ರ ಅಕ್ಟೋಬರ್​ನಲ್ಲಿ 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, 54 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದರು. ಜನವರಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾದ ಮೇಲೆ ಅನುಮಾನಗಳು ಹುಟ್ಟಿಕೊಂಡು ಒಂದೊಂದಾಗಿ ಆರೋಪಗಳು ಮತ್ತು ಸಾಕ್ಷ್ಯಗಳು ಬಹಿರಂಗವಾದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಕಲಬುರಗಿಯಲ್ಲಿ ಮೊದಲ ಅಭ್ಯರ್ಥಿ ವೀರೇಶ್ ಬಂಧನ ಆಗುತ್ತಿದ್ದಂತೆ ಚುರುಕುಗೊಂಡ ಸಿಐಡಿ ತನಿಖೆ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್​ಪಿ, ಸಶಸ್ತ್ರ ಮೀಸಲು ಪಡೆಯ ಇನ್​ಸ್ಪೆಕ್ಟರ್ ಮತ್ತು ಸಬ್​ಇನ್​ಸ್ಪೆಕ್ಟರ್​ಗಳು ಬಂಧನಕ್ಕೆ ಒಳಗಾದರು. ಅಲ್ಲದೆ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಈ ಎಲ್ಲರ ಹೇಳಿಕೆ ಪಡೆದಿರುವ ಸಿಐಡಿ ಅಧಿಕಾರಿಗಳು, ಇದೀಗ ಎಡಿಜಿಪಿಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದಾರೆ.

ಎರಡು ಜಿಲ್ಲೆಗೆ ಸೀಮಿತ: ಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕಲಬುರಗಿ ಮತ್ತು ಬೆಂಗಳೂರು ನಗರ ಜಿಲ್ಲೆಗೆ ಸೀಮಿತವಾಗಿಸಿದ್ದಾರೆ. ಏಳಕ್ಕೂ ಅಧಿಕ ಜಿಲ್ಲೆಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಎಲ್ಲ ಕಡೆಯೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಆದರೆ, ಕಲಬುರಗಿ ಮತ್ತು ಬೆಂಗಳೂರು ನಗರಕ್ಕೆ ತನಿಖೆ ಸೀಮಿತವಾಗಿದೆ. ಅದರಲ್ಲಿಯೂ ಎಫ್​ಐಆರ್​ನಲ್ಲಿ ಉಲ್ಲೇಖಿಸಿರುವ ಕೆಲ ಆರೋಪಿತ ಅಭ್ಯರ್ಥಿಗಳನ್ನು ಬಂಧಿಸಿಲ್ಲ. ಜನರಲ್ಲಿ ನೇಮಕಾತಿ ವಿಭಾಗದ ಮೇಲೆ ನಂಬಿಕೆ ಗಳಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.