ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳ ಕುರಿತು ಸಿಐಡಿ ಸಮಗ್ರವಾಗಿ ತನಿಖೆ ನಡೆಸಿದೆ ಎಂದು ಸಿಐಡಿ ಡಿಜಿಪಿ ಎಂ.ಎ. ಸಲೀಂ ಹೇಳಿದರು.
ಸೋಮವಾರ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಮಾಧ್ಯಮದವರಿಗೆ ಇದಿಷ್ಟೇ ವಿಷಯವನ್ನು ತಿಳಿಸಿದರು. ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದರು.
ಸಂಜೆ 5 ಗಂಟೆಗೆ ಆಗಮಿಸಿದ್ದ ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು, ಇವೆರಡು ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಸಿಐಡಿ ಎಸ್ಪಿ ಎನ್. ವೆಂಕಟೇಶ, ತನಿಖಾಧಿಕಾರಿ ಉಮೇಶ್ ಹಾಗೂ ಅಧಿಕಾರಿಗಳಿಂದ ದೇಶಪಾಂಡೆನಗರ ಸರ್ಕ್ಯೂಟ್ ಹೌಸ್ನಲ್ಲಿ ಒಂದೂವರೆ ತಾಸು ತನಿಖೆಯ ಹಂತ ಹಾಗೂ ಸಮಗ್ರ ಮಾಹಿತಿಯನ್ನು ಪಡೆದರು.
ಏಪ್ರಿಲ್ 18ರಂದು ಪ್ರಿಯಕರ ಫಯಾಜ್ ಎಂಬಾತನಿಂದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಡೆದಿತ್ತು. ಎರಡು ವಾರಗಳ ಹಿಂದೆ ನಗರದ ವೀರಾಪುರ ಓಣಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಹತ್ಯೆಯಾಗಿತ್ತು. ಈ ಎರಡೂ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಅಂಜಲಿ ಹತ್ಯೆ ಆರೋಪಿ ಗಿರೀಶ ಸಾವಂತನನ್ನು ದೇಶಪಾಂಡೆನಗರ ಸರ್ಕ್ಯೂಟ್ ಹೌಸ್ಗೆ ಕರೆತರಲಾಗಿತ್ತು. ಆದರೆ, ಸಿಐಡಿ ಡಿಜಿಪಿ ಎಂ.ಎ. ಸಲೀಂ ಎದುರು ಆತನನ್ನು ಹಾಜರುಪಡಿಸಲಿಲ್ಲ.
ಬಳಿಕ ಅವರು ವೀರಾಪುರ ಓಣಿಯ ಅಂಜಲಿ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಂದ ಮಾಹಿತಿ ಪಡೆದರು. ಆದಷ್ಟು ಶೀಘ್ರ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಿಡನಾಳದಲ್ಲಿರುವ ಮೃತ ನೇಹಾ ಹಿರೇಮಠ ನಿವಾಸಕ್ಕೆ ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು ಬುಧವಾರ ಭೇಟಿ ನೀಡುವ ಸಾಧ್ಯತೆಗಳಿವೆ.
ಈ ಎರಡೂ ಹತ್ಯೆ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದ್ದು, ದೋಷಾರೋಪಣೆ ಪಟ್ಟಿ ಸಲ್ಲಿಸಬೇಕಿದೆ.