ಬೆಳಗಾವಿ: ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮಗ್ರಂಥ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡದಿಂದ ಆರೋಪಿಗಳ ಪತ್ತೆಗೆ ತನಿಖೆ ಪ್ರಾರಂಭವಾಗಿದೆ.
ಪ್ರಕರಣದ ಗಂಭೀರತೆ ಅರಿತು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರಿಂದ ತನಿಖಾ ವರದಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಧರ್ಮಗ್ರಂಥ ಕಳ್ಳತನ ಮಾಡಿಕೊಂಡು ಹೋಗಿರುವ ಮಸೀದಿ ಸ್ಥಳ, ಸುಟ್ಟಿರುವ ಘಟನಾ ಸ್ಥಳಗಳಲ್ಲಿ ಸಿಐಡಿ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ಸಿಐಡಿ ಡಿವೈಎಸ್ಪಿ ಸುಲೇಮಾನ್ ತಹಶೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಿಐಡಿ ಅಧಿಕಾರಿಗಳ ತಂಡಕ್ಕೆ ಬೆಳಗಾವಿ ಪೊಲೀಸರು ಸಹಕಾರ ನೀಡಿದ್ದಾರೆ. ಮಂಗಳವಾರವೂ ಸಿಐಡಿ ಅಧಿಕಾರಿಗಳ ತಂಡದಿಂದ ಪ್ರಕರಣದ ತನಿಖೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರ ಬಂಧನಕ್ಕೆ ಆಗ್ರಹ:
ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಕ್ರೀದ್ ಹಬ್ಬದ ಒಳಗಾಗಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪೊಲೀಸರು ಪ್ರಕರಣದ ತನಿಖೆ ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಘಟನೆ ನಡೆದು 20 ದಿನ ಕಳೆದರೂ ಆರೋಪಿಗಳ ಬಂಧನವಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಂತಿ ಬಸ್ತವಾಡದಲ್ಲಿನ ಹಿಂದು ಮುಖಂಡರು ಗ್ರಾಮಸ್ಥರಿಗೆ ತಪ್ಪು ಸಂದೇಶ ನೀಡಿ, ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಅವರೊಂದಿಗೆ ಯಾವುದೇ ವ್ಯವಹಾರ ಮಾಡಬಾರದು ಎಂದು ಪ್ರಚಾರ ಮಾಡಿ ಕೋಮು ಸಾಮರಸ್ಯ ಕದಡುತ್ತಿದ್ದಾರೆ. ಊರಲ್ಲಿ ಅಶಾಂತಿ ಉಂಟುಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.