ಜಿಲ್ಲೆ

ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಪ್ರಕರಣ; ಕೃಷಿ ಇಲಾಖೆಯ ಎಡಿ, ಎಒ ಸಿಐಡಿ ವಶಕ್ಕೆ

Webdesk - Manjunatha B

ಮೈಸೂರು: ಸಚಿವ ಚಲುವರಾಯುಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರು ಜಿಲ್ಲೆ ಕೆ.ಆರ್​. ನಗರ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್​, ಅಧಿಕಾರಿ ಸುದರ್ಶನ್​ ಎಂಬುವವರನ್ನು ಸಿಐಡಿ ತನಿಖಾ ತಂಡ ವಶಕ್ಕೆ ಪಡೆದಿದೆ.

ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯ 7 ಸಹಾಯಕ ನಿರ್ದೇಶಕರ ಹೆಸರಿನಲ್ಲಿ ಪತ್ರ ಬರೆದು ಅವರ ಸಹಿಯನ್ನು ಸಕಲು ಮಾಡಿ ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿ ಮೂಲಕ ರಾಜ್ಯಪಾಲರಿಗೆ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಜಿಲ್ಲೆ ಕೆ.ಆರ್​. ನಗರ ತಾಲ್ಲೂಕಿನ ಕೃಷಿ ಇಲಾಖೆಯ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ಕೆ.ಆರ್​. ನಗರ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್​, ಅಧಿಕಾರಿ ಸುದರ್ಶನ್​ ಎಂಬುವವರನ್ನು ಸಿಐಡಿ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿತ್ತಾ, ಬೇರೆಯವರ ಕುಮ್ಮಕಿನಿಂದ ಪತ್ರ ಬರೆದಿದ್ದಾರ ಎಂಬುದರ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದೆ.

ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ ಈ ವಿಚಾರವಾಗಿ ನನಗೆ ಏನು ತಿಳಿದಿಲ್ಲ. ಸಿಐಡಿ ಸರ್ಕಾರಕ್ಕೆ ಇನ್ನು ವರದಿ ಸಲ್ಲಿಸಿಲ್ಲ. ಮಂಡ್ಯ ಜಿಲ್ಲೆಯ ಅಧಿಕಾರಿಗಳ ಹೆಸರಿನಲ್ಲಿ ಪತ್ರ ಬರೆಯಲಾಗಿದೆ. ಅವರ ಹೆಸರಿನಲ್ಲಿ ಏಕೆ ಪತ್ರ ಬರೆದರೂ ಎಂಬ ವಿಚಾರ ತಿಳಿಯಬೇಕಿದೆ. ಪತ್ರ ಬರೆಯುವಂತೆ ಒತ್ತಡ ಅಥವಾ ಪ್ರಚೋದನೆ ನೀಡಲಾಗಿತ್ತಾ ಎಂಬುದು ತನಿಖೆ ಬಳಿಕ ಹೊರಬೀಳಲಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.