ಹುಬ್ಬಳ್ಳಿ: ತಾಲೂಕಿನ ಅದರಗುಂಚಿಯ ಸಿ.ಐ.ಸಿ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಹಾಗೂ ಪಠ್ಯೇತರ ಮತ್ತು ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಶನಿವಾರ ಏರ್ಪಡಿಸಲಾಗಿತ್ತು.
ಮಹಾವಿದ್ಯಾಲಯ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು.
ಅತಿಥಿಯಾಗಿದ್ದ ಕಲಘಟಗಿ ಗುಡ್ ನ್ಯೂಸ್ ಕಾಲೇಜಿನ ಪ್ರಾಚಾರ್ಯ ಡಾ.- ಮಹೇಶ ಹೊರಕೇರಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್, ಡಾ. ಅಬ್ದುಲ್ ಕಲಾಂ, ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ಮಹನೀಯರ ಆದರ್ಶಗಳನ್ನು ಇಟ್ಟುಕೊಂಡು ಯುವಕರು ಬದುಕು ರೂಪಿಸಿಕೊಳ್ಳಬೇಕು. ನಿರಂತರ ಅಧ್ಯಯನದೊಂದಿಗೆ ಗುರಿ ಸಾಧನೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿ.ಐ.ಸಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಂಸ್ಥೆಯು ಶ್ರಮಿಸುತ್ತಿದೆ ಎಂದರು.
ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಸ್.ಎಂ. ಕಳಸೂರ, ಎಸ್.ಐ. ಉಣಕಲ್, ಎಸ್.ಜಿ. ಕಾಂಬಳೆ, ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಾಗ್ಯಾ ಸುರೇಬಾನ, ಜಂಟಿ ಕಾರ್ಯದರ್ಶಿ ಬಸನಗೌಡ ಪಾಟೀಲ, ಇತರರು ಇದ್ದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಆರ್.ಎಂ. ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಆರ್.ಎಫ್. ಭರಮಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಬಿ.ಜಿ. ವಾರ್ಷಿಕ ವರದಿ ವಾಚನ ಮಾಡಿದರು. ಎಚ್.ಕೆ. ತಳವಾರ ವಂದಿಸಿದರು.