ಜಿಲ್ಲೆ

ಸಿಬಿಲ್ ನೆಪದಲ್ಲಿ ಸಾಲ ನಿರಾಕರಣೆ - ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಆರೋಪ

Mangaluru - Nishantha Narayana

ಪುತ್ತೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬಡವರು ಹೋಗುವುದನ್ನು ತಪ್ಪಿಸಲು ಸಿಬಿಲ್ ಎಂಬ ಅವ್ಯವಸ್ಥೆಯನ್ನು ಮುಂದಿಡುತ್ತಿವೆ. ಈ ಮೂಲಕ ಸರ್ಕಾರಿ ಸಾಲ ಸೌಲಭ್ಯ ಪಡೆಯಲು ಫಲಾನುಭವಿಗಳನ್ನು ಸತಾಯಿಸುತ್ತಿವೆ. ಬ್ಯಾಂಕ್‌ಗಳ ಇಂತಹ ವ್ಯವಸ್ಥೆಯನ್ನು ಕೇಳುವವರೇ ಇಲ್ಲವಾಗಿದೆ ಎಂದು ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಆರೋಪಿಸಿದ್ದಾರೆ.

ಸರ್ಕಾರದ ವಿವಿಧ ನಿಗಮದಿಂದ ಮಂಜೂರಾದ ಸಾಲ ಸಹಾಯಧನವನ್ನು ನೀಡಲು ಬ್ಯಾಂಕ್‌ಗಳು ನಿರಾಕರಿಸುತ್ತಿದ್ದು, ಈ ಹಿಂದಿನ ಸಾಲದ ಹಾಗೂ ಮರುಪಾವತಿಯ ವಿಳಂಬವನ್ನು ಮುಂದಿಡುತ್ತಿವೆ. ಫಲಾನುಭವಿಗಳು ಈ ಹಿಂದಿನ ಸಾಲವನ್ನು ೩ ವರ್ಷಗಳ ಹಿಂದೆಯೇ ಮರುಪಾವತಿ ಮಾಡಿದ್ದರೂ, ಹಿಂದಿನ ಯಾವುದೇ ಸಾಲ ಮರು ಬಾಕಿ ಇಲ್ಲದಿದ್ದರೂ ಸಿಬಿಲ್ ಮುಂದಿಟ್ಟು ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಇದರಿಂದ ಫಲಾನುಭವಿಗಳು ಸಾಲ ಸಹಾಯಧನದಿಂದ ವಂಚಿತರಾಗಿದ್ದು, ಸ್ವ ಉದ್ಯೋಗ ಮೂಲಕ ಜೀವನ ಭದ್ರತೆಗೆ ಶಕ್ತಿಯನ್ನು ಕೊಡುವ ಸರ್ಕಾರದ ಆಶಯಕ್ಕೆ ಬ್ಯಾಂಕ್‌ಗಳು ವಿರುದ್ಧ ನಿಂತಿದೆ ಎಂದು ಆರೋಪಿಸಿದ್ದಾರೆ.

ಪುತ್ತೂರಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಂಡು ಫಲಾನುಭವಿಗಳಿಗೆ ನ್ಯಾಯವನ್ನು ಒದಗಿಸಬೇಕಾಗಿದೆ. ಇಲ್ಲದಿದ್ದರೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ನಿಗಮಗಳಿಂದ ಮಂಜೂರಾಗುವ ಸಾಲಗಳನ್ನು ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಸಹಕಾರ ಸಂಘಗಳಿಗೆ ನೀಡಿದಲ್ಲಿ ಫಲಾನುಭವಿಗಳಿಗೆ ಪ್ರಯೋಜನವಾದೀತು ಎಂದು ಹೇಳಿದ್ದಾರೆ.