ಜಿಲ್ಲೆ

ರೈತರು ಕೃಷಿ ತೊರೆದರೆ ಆಹಾರದ ಬಿಕ್ಕಟ್ಟು: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆತಂಕ

ಕೆ.ಎನ್.ರಾಘವೇಂದ್ರ

ಮಂಡ್ಯ: ರೈತರು ಕಾಯಕ ತೊರೆದರೆ ಸೃಷ್ಠಿಯಾಗುವ ಆಹಾರ ಬಿಕ್ಕಟ್ಟು ಸರಿದೂಗಿಸಲು ಯಾವ ಸಂಶೋಧನೆಯಿಂದಲೂ ಸಾಧ್ಯವಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ ಎಂದು ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ನಗರದ ಡಾ.ರಾಜ್‌ಕುಮಾರ್ ಬಡಾವಣೆ ಪಕ್ಕದ ಮೈದಾನದಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯ, ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮ ನಿಯಮಿತ, ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಿರಿಧಾನ್ಯ ಮೇಳ-ವಸ್ತು ಪ್ರದರ್ಶನ ಹಾಗೂ ಬೆಲ್ಲದ ಪರಿಷೆಯ ಸಾನಿಧ್ಯ ವಹಿಸಿ ಮಾತನಾಡಿದರು.

ಯಾವುದೇ ದೇಶವಾದರೂ ಹಳ್ಳಿಯಿಂದ ಉಸಿರಾಡುತ್ತದೆ. ಮಾತ್ರವಲ್ಲದೆ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುತ್ತದೆ. ಆದರೀಗ ಕೃಷಿಯನ್ನು ಲಾಭದಾಯಕ ಮಾಡದಿದ್ದರೆ ರೈತರು ಉಳಿಯುವುದಿಲ್ಲ. ಮೊದಲು ನಾವು ಭೂಮಿಗೆ ಹಾಕುತ್ತಿರುವ ರಸಗೊಬ್ಬರದ ಪ್ರಮಾಣ ಕಡಿಮೆ ಮಾಡಿ ಕೃಷಿಯನ್ನು ಲಾಭಧಾಯಕ ಮಾಡದಿದ್ದರೆ, ನಮ್ಮ ಆರ್ಥಿಕತೆ ಅಧೋಗತಿಗೆ ಇಳಿಯಲಿದೆ ಎಂದು ಎಚ್ಚರಿಸಿದರು.

ದೇಶದ ಬಹು ಸಂಖ್ಯಾತ ಜನರು ಕೃಷಿಯನ್ನು ಅವಲಂಬಿಸಿದ್ದರೂ ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಕೃಷಿಕರ ಬದುಕು ದುಸ್ಥರವಾಗಿದೆ. ಆದ್ದರಿಂದ ಬೇಸಾಯ ಲಾಭದಾಯಕವಾಗಿಸುವ ಸಂಶೋಧನೆಗಳು ನಮ್ಮ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೈಗಾರಿಕಾ ವಲಯಗಳಿಂದ ಮೂಡಿ ಬರಬೇಕೆಂದು ಕರೆ ನೀಡಿದರು.

ರೈತರು ಸಹ 6 ತಿಂಗಳು ಹಗಲಿರುಳು ಶ್ರಮಪಟ್ಟು ಬೆಳೆದ ಉತ್ಪನ್ನಗಳನ್ನು ಕಟಾವು ಹಂತದಲ್ಲೇ ಮಾರಾಟ ಮಾಡುವ ಪ್ರವೃತ್ತಿಯಿಂದ ದೂರವಾಗಿ ಒಂದೆರಡು ತಿಂಗಳ ಕಾಲ ಸಂಗ್ರಹಿಸಿ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಬಹುದು. ಇಂದು ವಿಶ್ವದಲ್ಲಿ ಸಿರಿಧಾನ್ಯ ಬಳಕೆ ಹಾಗೂ ರಫ್ತು ಹೆಚ್ಚಾಗುತ್ತಿದೆ. ಅದಕ್ಕೆ ಬೆಲೆ ದುಬಾರಿಯಾಗುತ್ತಿದ್ದು, ಉತ್ತಮ ಆರೋಗ್ಯಕ್ಕೆ ಪೂರಕವಾಗಿರುವ ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ರೈತರು ಒಲವು ತೋರಬೇಕು ಎಂದರು.