ಆಲ್ದೂರು: ಆಲ್ದೂರು ಗ್ರಾಪಂ ಉಪ ಚುನಾವಣೆ ಹಿನ್ನಲೆಯಲ್ಲಿ ಸಂತೆಯನ್ನು ಜಿಲ್ಲಾಧಿಕಾರಿ ಆದೇಶದ ಹಿನ್ನಲೆಯಲ್ಲಿ ರದ್ದುಮಾಡಲಾಗಿತ್ತು. ಆದರೆ ಸಂತೆ ರದ್ದಾಗಿರುವ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದರಿಂದ ಸಂತೆಗೆ ಬಂದ ಗ್ರಾಹಕರು, ವ್ಯಾಪಾರಸ್ಥರು ಪರದಾಡುವಂತಾಯಿತು.
ಮಾಹಿತಿ ಇಲ್ಲದೆ ಬಂದ ಸಂತೆ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ವಾಹನಗಳಲ್ಲಿ ತರಕಾರಿ ವ್ಯಾಪಾರ ನಡೆಸಿದರು. ಇದರಿಂದ ಟ್ರಾಫಿಕ್‌ಜಾಮ್ ಉಂಟಾಗಿ ವಾಹನ ಓಡಾಟಕ್ಕೆ ತೊಂದರೆಯಾಯಿತು. ನಂತರ ಸ್ಥಳಕ್ಕೆ ಬಂದ ಪೊಲೀಸರು ರಸ್ತೆ ಬದಿಯಲ್ಲಿ ಹಾಕಿದ್ದ ತರಕಾರಿ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ನಾವು ಚಿಕ್ಕಮಗಳೂರಿನಿಂದ ಬಾಡಿಗೆ ವಾಹನದಲ್ಲಿ ತರಕಾರಿ ತುಂಬಿಸಿಕೊಂಡು ಮಾರಾಟ ಮಾಡಲು ಬಂದಿದ್ದೇವೆ . ಸಂತೆ ರದ್ದು ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ .ನಾವು ತಂದಿರುವ ತರಕಾರಿ ಎಲ್ಲಿ ಮಾರಾಟ ಮಾಡುವುದು? ಅಧಿಕಾರಿಗಳು ನಮಗೆ ಕಳೆದ ವಾರ ಸಂತೆ ದಿನವೇ ಮಾಹಿತಿ ನೀಡಿದ್ದರೆ ನಾವು ಸಂತೆಗೆ ಬರುತ್ತಿರಲಿಲ್ಲ. ನಮಗೆ ಸಾವಿರಾರು ರೂ. ನಷ್ಟವಾಗಿದ್ದು ಇದನ್ನು ತುಂಬಿಸಿಕೊಡುವವರು ಯಾರು ಎಂದು ಸಂತೆಗೆ ಬಂದ ವ್ಯಾಪಾರಿಗಳು ಸ್ಥಳೀಯ ಆಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.