ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರಿಸ್ಮಸ್ ಹಬ್ಬವು ಪ್ರೀತಿ, ಕರುಣೆಯನ್ನು ಹಂಚುವ ಹಬ್ಬ. ಜಗತ್ತಿನಾದ್ಯಂತ ಕ್ರೈಸ್ತರು ಅತ್ಯಂತ ಪ್ರೀತಿಯಿಂದ ಆಚರಿಸುವ ಹಬ್ಬ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಕರ್ನಾಟಕ ಉತ್ತರ ಸಭಾಪ್ರಾಂತ, ಬಾಸೆಲ್ ಮಿಶನ್ ಉಚ್ಛ ಶಿಕ್ಷಣ ಸಂಸ್ಥೆ ಹಾಗೂ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಳಿಯಾಳ ರಸ್ತೆಯ ಕೆ.ಎನ್.ಡಿ. ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಕ್ರಿಸ್ಮಸ್ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಂಧ್ರಪ್ರದೇಶದ ಬಿಷೋಪ್ ರೈ.ರೆ. ಪೆಯ್ಯಾಲಾ ಐಸ್ಯಾಕ್ ವರಪ್ರಸಾದ ಮಾತನಾಡಿ, ನಾವು ಒಗ್ಗಟ್ಟಾಗಿ ಇರಬೇಕು. ಒಗ್ಗಟ್ಟಿನಲ್ಲಿ ಶಕ್ತಿಯಿದೆ. ದಕ್ಷಿಣ ಭಾರತ ಕ್ರೈಸ್ತ ಮಾಹಾಸಭೆಗೆ ತನ್ನದೇ ಆದ ಭವ್ಯ ಪರಂಪರೆ ಇದೆ. ಅದನ್ನು ಉಳಿಸಿ ಬೆಳೆಸಬೇಕು. ಕ್ರಿಸ್ತನ ಉಪದೇಶ ಇಂದಿಗೂ ಪ್ರಸ್ತುತ. ಆತನ ಉಪದೇಶಗಳನ್ನು ಮನನ ಮಾಡುತ್ತಾ ಕ್ರಿಸಮಸ್ ಆಚರಣೆ ಮಾಡೋಣ ಎಂದರು.
ನಿವೃತ್ತ ಪಾದ್ರಿಗಳು, ಬಿ++ ನ್ಯಾಕ್ ಶ್ರೇಣಿ ಪಡೆದ ಕಿಟೆಲ್ ಕಲಾ ಕಾಲೇಜಿನ ರೇಖಾ ಜೋಗುಳ, ದಾನಿಗಳಾದ ಜಯಶೀಲ ಭಸ್ಮೆ, ಸಲ್ಮಾ ಭಸ್ಮೆ ಅವರಿಗೆ ಸನ್ಮಾನಿಸಲಾಯಿತು. ಕರ್ನಾಟಕ ಉತ್ತರ ಸಭಾಪ್ರಾಂತದ ತಿದ್ದುಪಡಿ ಮಾಡಿದ ಸಂವಿಧಾನವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕಿಟಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕ್ರಿಸ್ತನ ಜನನದ ರೂಪಕ ಪ್ರದರ್ಶಿಸಿದರು.
ಕರ್ನಾಟಕ ಉತ್ತರ ಸಭಾಪ್ರಾಂತದ ಬಿಷೋಪ್ ರೈ.ರೆ. ಮಾರ್ಟಿನ್ ಬೋರ್ಗಾಯಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತಿಡೋರ ವಿಲಿಯಮ್ಸ, ಎಸ್. ಕುಮಾರ, ರೆ. ಸ್ಯಾಮುವೇಲ್ ಕ್ಯಾಲ್ವೀನ್, ರೆ. ಸತ್ಯಬಾಬು, ಪ್ರೇಮಾ ಬೋರ್ಗಾಯಿ, ವಿಲ್ಸನ್ ಮೈಲಿ ಇತರರು ಇದ್ದರು.
ವಿಜಯಕುಮಾರ ದಂಡಿನ ಸ್ವಾಗತಿಸಿದರು. ವಿಜಯ ಅಮೃತ ರಾಜನ್, ಡಾ. ಪ್ರೇಮಲತಾ ಕೋಟಿ ಹಾಗೂ ಶಾರೋನ ಅಳಗೋಡಿ ನಿರೂಪಿಸಿದರು.