ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ ವಿಜಯಪುರದ ಎಂಜಿ ರಸ್ತೆಯಲ್ಲಿರುವ ಸಂತ ಅನ್ನಮ್ಮನವರ ದೇವಾಲಯಕ್ಕೆ ಅಪಾರ ಭಕ್ತರು ಭೇಟಿ ನೀಡಿದರು. 
ಜಿಲ್ಲೆ

ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಏಸುವಿನ ಜನ್ಮದಿನದ ಹಿನ್ನೆಲೆ ಆಚರಿಸುವ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ನಗರದ ವಿವಿಧ ಚರ್ಚ್‌ಗಳಲ್ಲಿ ಅತ್ಯಂತ ಸಡಗರ, ಸಂಭ್ರಮ, ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.

ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯ ಸಿಎಸ್‌ಐ ಚರ್ಚ್ ಮತ್ತು ಎಂಜಿ ರಸ್ತೆಯಲ್ಲಿರುವ ಸಂತ ಅನ್ನಮ್ಮನವರ ಚರ್ಚ್‌ಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದವು. ಕ್ರೈಸ್ತ ಭಾಂಧವರು ಕುಟುಂಬ ಸಮೇತ ಚರ್ಚ್‌ಗಳಿಗೆ ತೆರಳಿ ಮೇಣದಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದ್ದು ಕಂಡು ಬಂದಿತು. ಚರ್ಚ್‌ನ ಫಾದರ್‌ಗಳು ವಿಶೇಷ ಸಂದೇಶ ಬೋಧಿಸಿದರು.

ನಗರದ ವಿವಿಧ ಚರ್ಚ್‌ಗಳಿಗೆ ಹಬ್ಬದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕಾರ, ನಕ್ಷತ್ರ ಆಕಾರದ ಆಕಾಶಬುಟ್ಟಿಗಳು ಕ್ರಿಸ್‌ಮಸ್ ಅಂದವನ್ನು ಹೆಚ್ಚಿಸಿದ್ದವು. ಇಲ್ಲಿನ ಎಂಜಿ ರಸ್ತೆಯಲ್ಲಿರುವ ಚರ್ಚ್ ಆವರಣದಲ್ಲಿ ಬಾಲಯೇಸುವಿನ ಜನನ ಸಾರುವ ಗೊದಲಿಯನ್ನು ನಿರ್ಮಿಸಲಾಗಿದ್ದು, ಜನರನ್ನು ಹೆಚ್ಚು ಆಕರ್ಷಿಸಿತು. ಇನ್ನು ಸಂಜೆಯ ವೇಳೆ ಚರ್ಚ್‌ಗಳಿಗೆ ಅಪಾರ ಸಂಖ್ಯೆಯ ಜನತೆ ಭೇಟಿ ನೀಡಿದ ಹಿನ್ನೆಲೆ ಚರ್ಚ್ ಆವರಣಗಳು ಜನರಿಂದ ತುಂಬಿದ್ದವು.

ಕ್ರಿಸ್‌ಮಸ್ ಹಿನ್ನೆಲೆ ಕೇಕ್ ವ್ಯಾಪಾರವು ಭರ್ಜರಿಯಾಗಿ ನಡೆಯಿತು. ಚರ್ಚ್‌ಗಳಿಗೆ ಭೇಟಿ ನೀಡುವ ಜನರು ಸಾಂತಾ ಕ್ಲಾಸ್‌ನ ಟೋಪಿ ಧರಿಸಿ ಸೆಲ್ಫಿ, ಫೋಟೋ ತೆಗೆದುಕೊಂಡು ಸಂಭ್ರಮಿಸಿದರು. ಚರ್ಚ್‌ಗಳಲ್ಲಿ ದಿನವೀಡಿ ಕ್ರಿಸ್‌ಮಸ್ ಗೀತೆಗಳನ್ನು ಹಾಕುವ ಮೂಲಕ ಭಕ್ತರು ಏಸುವಿನ ಗುಣಗಾನವನ್ನು ಆಲಿಸಿದರು.

ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಂಗಳವಾರ ರಾತ್ರಿಯಿಂದಲೇ ವಿಶೇಷ ಪೂಜೆಗಳು ನಡೆದಿವೆ. ಎರಡು ದಿನಗಳಲ್ಲಿ ಚರ್ಚ್‌ಗಳಿಗೆ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿದ್ದು, ಅವರಿಗೆಲ್ಲ ಪ್ರಸಾದ ರೂಪದಲ್ಲಿ ಕೇಕ್, ಬಾದಾಮಿ ಹಾಲು, ಗೋಡಂಬಿಗಳನ್ನು ವಿತರಿಸಲಾಗಿದೆ. ಅಲ್ಲದೆ, ಹಬ್ಬದ ದಿನ ಕ್ರೀಡೆಗಳನ್ನು ಸಹ ಆಯೋಜಿಸಲಾಗಿತ್ತು ಎಂದು ಎಂಜಿ ರಸ್ತೆಯ ಚರ್ಚ್‌ನ ಫಾಧರ್ ಜೋಸೆಫ್ ತಿಳಿಸಿದರು.

ಹಬ್ಬದ ಹಿನ್ನೆಲೆ ಈ ಬಾರಿ ಚರ್ಚ್‌ಗೆ ಅಷ್ಟೊಂದು ವಿದ್ಯುತ್ ದೀಪಗಳ ಅಲಂಕಾರ ಮಾಡಿಲ್ಲ. ಏಸುವಿನ ಪ್ರೀತಿ, ಶಾಂತಿ, ಸಾಮರಸ್ಯದ ಸಂದೇಶದಂತೆ ವ್ಯರ್ಥವಾಗಿ ಹಾಳಾಗುತ್ತಿದ್ದ ವಿದ್ಯುತ್ ಅಲಂಕಾರದ ಹಣದಿಂದ ಜಿಲ್ಲೆಯಲ್ಲಿರುವ ಎಚ್‌ಐವಿ ಪೀಡಿತರಿಗೆ ಅದೇ ಹಣದಿಂದ ನೆರವು ನೀಡಲಾಗುತ್ತಿದೆ ಎಂದು ಇನ್ನೋರ್ವ ಫಾದರ್ ಟಿಯೋಲ್ ಮಚಾದೋ ಹೇಳಿದರು.