ಜಿಲ್ಲೆ

ಕ್ರಿಸ್‌ಮಸ್ ಹಿನ್ನೆಲೆ ಕ್ಯಾರಲ್ ಸಂಭ್ರಮ

ಬಾಳೆಹೊನ್ನೂರು: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ವಿಜಯಮಾತೆ ಚರ್ಚ್‌ನಿಂದ ರೇಣುಕನಗರದ ವಾರ್ಡ್‌ನ ಕ್ರೈಸ್ತ ಬಾಂಧವರ ಮನೆಯಲ್ಲಿ ಏಸು ಕ್ರಿಸ್ತನ ಜನನ ಸಂದೇಶ ಸಾರುವ ಕ್ಯಾರಲ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ವಿಜಯಮಾತೆ ಚರ್ಚ್‌ನ ಕಿರಿಯ ಧರ್ಮಗುರು ಕೀರ್ತಿ ಕಿರಣ್ ನೇತೃತ್ವದಲ್ಲಿ ಕ್ರೈಸ್ತರು ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುರೊಂದಿಗೆ ಬಾಲ ಏಸುವಿನ ಮೂರ್ತಿ ಇಟ್ಟು ಕ್ರೈಸ್ತ ಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಏಸು ಕ್ರಿಸ್ತನ ಜನನ ವೃತ್ತಾಂತವನ್ನು ಎಲ್ಲರಿಗೂ ತಿಳಿಸಿ ಕ್ರಿಸ್ಮಸ್‌ನಂದು ಏಸು ಕ್ರಿಸ್ತನ ಜನನ ಕಾರ್ಯಕ್ರಮವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡರು. ಕ್ರಿಸ್‌ಮಸ್ ಹಬ್ಬಕ್ಕಾಗಿ ತಯಾರಿಸಿದ ವಿಶೇಷ ತಿಂಡಿ ತಿನಿಸು ಹಾಗೂ ಕೇಕ್‌ಗಳನ್ನು ಸಾಂತಾಕ್ಲಾಸ್ ವೇಷಧಾರಿಗಳು ಸರ್ವಧರ್ಮದ ಮನೆಗಳಿಗೂ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.