ಕೊಳ್ಳೇಗಾಲ: ಇಲ್ಲಿನ ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯದ ಆವರಣದಲ್ಲಿ ಸೆ.24 ರಂದು ನಡೆಯಲಿರುವ ಕ್ರೈಸ್ತ ಒಕ್ಕೂಟದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಕೊಳ್ಳೇಗಾಲ ತಾಲೂಕು ಕ್ರೈಸ್ತ ಸಮುದಾಯ ಒಕ್ಕೂಟದ ಅಧ್ಯಕ್ಷ ಜಿ. ಸೆಲ್ವರಾಜು ಹೇಳಿದರು.
ಕೊಳ್ಳೇಗಾಲ ತಾಲೂಕು ಕ್ರೈಸ್ತ ಒಕ್ಕೂಟ ಉದ್ಘಾಟನೆ ಹಾಗೂ ಪ್ರಥಮ ಸರ್ವ ಸದಸ್ಯರ ಸಭೆ ನಡೆಯುವ ಕುರಿತು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿವಿಧ ಸಭೆಗಳ ಕ್ರೈಸ್ತ ಮುಖಂಡರು ತಮ್ಮ ಸಹ ಮತವಿಲ್ಲ ಎಂದಿದ್ದಾರೆ ಎಂದು ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೈಸ್ತ ಸಮುದಾಯದ ಫಾದರ್‌ಗಳು ಮತ್ತು ಮುಖಂಡರು ನೂತನ ಒಕ್ಕೂಟದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾಗಿದೆ. ಇಲ್ಲಿ ಹತ್ತರಿಂದ ಹನ್ನೆರಡು ಕ್ರೈಸ್ತ ಸಭೆಗಳಿದ್ದು, ಆರು ಸಭೆಗಳ ಪದಾಧಿಕಾರಿಗಳು ಆಯ್ಕೆಯಾಗಿಲ್ಲ. ಎಲ್ಲರೂ ಸೇರಿ ಕಾರ್ಯಕ್ರಮ ಮಾಡೋಣ. ಸದ್ಯಕ್ಕೆ ಈ ಕಾರ್ಯಕ್ರಮವನ್ನು ಮುಂದೂಡಿ ಎಂದು ಹೇಳಿದ್ದೆವು. ಆದರೆ ಕೇವಲ ಒಂದು ಭಾಗದವರು ಸೇರಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಾಗಾಗಿ ನಾವು ಭಾಗಿಯಾಗುವುದಿಲ್ಲ ಎಂದರು.
ಒಕ್ಕೂಟದ ಹಿರಿಯ ಉಪಾಧ್ಯಕ್ಷ ಟಿ.ಜಾನ್‌ಪೀಟರ್ ಮಾತನಾಡಿ, ಈಗ ಆಯೋಜಿಸಿರುವ ಕಾರ್ಯಕ್ರಮದ ಬಗ್ಗೆ ನಮಗೆ ಮಾಹಿತಿ ಇಲ್ಲ. ಕಳೆದ ನಾಲ್ಕು ತಿಂಗಳ ಹಿಂದೆ ಎಲ್ಲರೂ ಸೇರಿ ಸಭೆ ಮಾಡಿ ಒಗ್ಗಟ್ಟಾಗಿ ಮುಂದುವರಿಯೋಣ ಎಂದು ಹೇಳಿದ್ದೆವು. ಆದರೆ ಅವರು ಒಪ್ಪಲಿಲ್ಲ. ನಾವೆಲ್ಲರೂ ಒಮ್ಮತವಾಗಿ ಸಹಮತ, ಸೋದರತ್ವ, ಐಕ್ಯತೆಯಿಂದ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಕ್ರೈಸ್ತ ಒಕ್ಕೂಟದ ಕಾರ್ಯದರ್ಶಿಗಳ ಹೇಳಿಕೆ ಸುಳ್ಳಾಗಿದೆ. ಇದರಲ್ಲಿ ನಾವ್ಯಾರು ಭಾಗವಹಿಸುತ್ತಿಲ್ಲ ಎಂದು ಹೇಳಿದರು.
ಕ್ರೈಸ್ತ ಸಮುದಾಯ ಒಕ್ಕೂಟದ ಉಪಾಧ್ಯಕ್ಷರಾದ ಬಸವರಾಜು, ವಿಲ್ಸನ್ ಸಾಧು, ಅಗಸ್ಟಿನ್, ಕಾರ್ಯದರ್ಶಿ ಸದಾನಂದ ಸಾಧು, ಖಜಾಂಚಿ ಸಾಮುವೆಲ್, ನಿರ್ದೇಶಕರಾದ ಮನೋಜ್ ಪ್ಯಾರಡೈಸ್, ವಿಲಿಶ್ ಬಾಬು ಇದ್ದರು.