ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗ ತರಾತುರಿಯಲ್ಲಿ, ಪೂರ್ವಸಿದ್ಧತೆ ಇಲ್ಲದ ಗಣತಿ ಮಾಡಲು ಹೊರಟಿದೆ. 47 ಹಿಂದು ಉಪಜಾತಿಯೊಂದಿಗೆ 'ಕ್ರಿಶ್ಚಿಯನ್' ಜೋಡಿಸಲಾಗಿದೆ. ಈ ಬಗ್ಗೆ ವಿರೋಧವಿದ್ದರೂ ಸಿಎಂ ಸಿದ್ದರಾಮಯ್ಯ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಕ್ರೈಸ್ತ ಮಿಷನರಿ ನೆರಳು ಸಿಎಂ ಕಚೇರಿ ಮೇಲೆ ಬಿದ್ದಿದೆ. ಹೀಗಾಗಿ ಮೂಲ ಸಿದ್ದರಾಮಯ್ಯ ನಮಗೆ ಮರೆತು ಹೋಗಿದ್ದಾರೆ ಎಂದು ಮಾಜಿ ಸಚಿವ ವಿ.ಸುನೀಲಕುಮಾರ್ ಟೀಕಿಸಿದ್ದಾರೆ.
ಉಡುಪಿಯಲ್ಲಿ ಸೆಪ್ಟೆಂಬರ್ 21ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಒತ್ತಾಯಕ್ಕೆ ಮಣಿದು ಗಣತಿ ನಡೆಯಲಿದೆ. ಮರುಚಿಂತನೆಯೊಂದಿಗೆ ಜಾತಿ ಗಣತಿ ಮುಂದೂಡಬೇಕು. ಅಗತ್ಯತೆ ಅಥವಾ ಅನಿವಾರ್ಯತೆಯ ಕುರಿತು ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದರು.
ಸಿದ್ದರಾಮಯ್ಯ ಅವರು ಕುಲ ಶಾಸ್ತ್ರದ ಅಧ್ಯಯನ ಮಾಡಬೇಕು. ಸಮೀಕ್ಷೆ ಹೆಸರಲ್ಲಿ ಸಮಾಜ ಒಡೆಯುತ್ತಿರುವ ಅವರು ಸಂವಿಧಾನವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ? ಕೂಡಲೇ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಹಾಗೂ 75 ಉಪಜಾತಿಯ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕು. ಹಿಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಹೆಸರು ತೆಗೆಯುವವರೆಗೆ ರಾಜ್ಯವ್ಯಾಪಿ ಪ್ರತಿ ತಾಲೂಕಿನಲ್ಲೂ ಬಿಜೆಪಿಯಿಂದ ಹೋರಾಟ ನಡೆಸುತ್ತೇವೆಂದು ಸುನೀಲಕುಮಾರ್ ಎಚ್ಚರಿಕೆ ನೀಡಿದರು.
ಲಿಂಗಾಯತ ಧರ್ಮ ಪ್ರತ್ಯೇಕ ಚರ್ಚೆ ವಿಚಾರದಲ್ಲಿ ಬಿಜೆಪಿಗೆ ಸ್ಪಷ್ಟವಾದ ನಿಲುವಿದೆ. ಸಮೀಕ್ಷೆಯಲ್ಲಿ ಧರ್ಮದ ಕೋಷ್ಟಕದಲ್ಲಿ ಹಿಂದು ಬರೆಸಬೇಕು ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಹೇಳಿದ್ದಾರೆ. ಈ ವಿಚಾರದಲ್ಲಿ ಮಠಾಧೀಶರು ಹಾಗೂ ಲಿಂಗಾಯತ ನಾಯಕರ ಮನ ಒಲಿಸುತ್ತೇವೆ ಎಂದು ಸುನೀಲಕುಮಾರ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಒಡೆದು ಹೋಗಿದ್ದು ಅವರೀಗ ಏಕಾಂಗಿಯಾಗಿದ್ದಾರೆ. ನವೆಂಬರ್, ಡಿಸೆಂಬರ್ ಬೆಳವಣಿಗೆಯಿಂದ ಪಂಚ ಗ್ಯಾರಂಟಿ ಯೋಜನೆಯಂತೆಯೇ ಕಾಂಗ್ರೆಸ್ನಲ್ಲಿ 5 ಒಳಪಂಗಡ ರಚನೆಯಾಗಿದೆ. ಜಾರಕಿಹೊಳಿ, ಡಿ.ಕೆ., ಪರಮೇಶ್ವರ, ಸಿದ್ದರಾಮಯ್ಯ, ಸುರ್ಜೇವಾಲಾ ಎಂಬ 5 ಪಂಗಡವಾಗಿದೆ. | ವಿ.ಸುನೀಲಕುಮಾರ್. ಮಾಜಿ ಸಚಿವ