ಜಿಲ್ಲೆ

ಚೌಗುಲೆ ಶಿಕ್ಷಣ ಸಂಸ್ಥೆ ಉತ್ಸವ 28 ರಿಂದ

ರಾಯಬಾಗ: ಪಟ್ಟಣದಲ್ಲಿ ಅ.28 ರಿಂದ 30ರ ವರೆಗೆ ಭರಮಾ ಅಣ್ಣಪ್ಪ ಚೌಗುಲೆ ಶಿಕ್ಷಣ ಸಂಸ್ಥೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಸಂಸ್ಥೆ ಅಧ್ಯಕ್ಷ ಎಲ್.ಬಿ.ಚೌಗುಲೆ ಹೇಳಿದರು.

ಪಟ್ಟಣದ ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.28 ರಂದು ಬೆಳಗ್ಗೆ 11 ಗಂಟೆಗೆ ಸಂಸ್ಥೆ ಉತ್ಸವ ಉದ್ಘಾಟನೆಗೊಳ್ಳಲಿದೆ. ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಜಯಪುರ ಜಿಲ್ಲೆಯ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಉದ್ಘಾಟಿಸುವರು.

ಸಂಸ್ಥೆ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆ ವಹಿಸುವರು. ನಿರ್ದೇಶಕ ಅಮರ ನಾಗರಾಳೆ ಗೌರವ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಕುಲಪತಿ ಸಿ.ಎಂ.ತ್ಯಾಗರಾಜ ಆಗಮಿಸುವರು. ಧಾರವಾಡದ ಡಾ.ಎಚ್.ಎಲ್.ಇಳಕಲ್ಲ ಹಾಗೂ ಶಿವಾನಂದ ಕರಗಾಂವೆ ತಂಡ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅ.29 ರಂದು ಬೆಳಗ್ಗೆ 11 ಗಂಟೆಗೆ ಹಿರಿಯರ ಸ್ಮರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭ ನಡೆಯಲಿದೆ. ಹಂಚಿನಾಳ ಭಕ್ತಿ ಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ ಅಧ್ಯಕ್ಷತೆ ವಹಿಸುವರು. ನಿರ್ದೇಶಕಿ ಐಶ್ವರ್ಯ ಚೌಗುಲೆ ಗೌರವ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಡಾ.ರಾಜಶೇಖರ ಮಠಪತಿ ಆಗಮಿಸುವರು ಎಂದರು.

ಅ.30 ರಂದು ಬೆಳಗ್ಗೆ 11 ಗಂಟೆಗೆ ದಿ.ಸತೀಶ ಚೌಗುಲೆ ಅವರ 34ನೇ ಜನ್ಮದಿನ ಹಾಗೂ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಮಮದಾಪುರದ ಮೌನ ಮಲ್ಲಿಕಾರ್ಜುನ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ರಾಜ್ಯ ಅಗ್ನಿಶಾಮಕ ಮತ್ತು ಸೇವೆಗಳ ಇಲಾಖೆ ಡಿಐಜಿ ರವಿ ಡಿ.ಚನ್ನಣ್ಣವರ ಆಗಮಿಸುವರು. ಸಂಸ್ಥೆ ಅಧ್ಯಕ್ಷ ಎಲ್.ಬಿ.ಚೌಗುಲೆ, ಉಪಾಧ್ಯಕ್ಷೆ ಭಾರತಿ ಚೌಗುಲೆ ಉಪಸ್ಥಿತರಿರುವರು ಎಂದು ತಿಳಿಸಿದರು. ಕಾರ್ಯದರ್ಶಿ ವಿನಯ ಚೌಗುಲೆ, ನಿರ್ದೇಶಕಿ ಐಶ್ವರ್ಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎಸ್.ದಿಗ್ಗೆವಾಡಿ, ಶಿವಾನಂದ ನಾಂದಣಿ ಇತರರಿದ್ದರು.