ವಿಜಯಪುರ : ಛೋಟಾ ಬಾಂಬೆ ಕನ್ನಡ ಚಲನಚಿತ್ರ ಜುಲೈ 8ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕ ಯೂಸುಫ್ ಖಾನ್ ತಿಳಿಸಿದರು.
ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ ಹುಬ್ಬಳ್ಳಿ ಕರ್ನಾಟಕದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿದೆ. ಒಂದೊಮ್ಮೆ ಹೂಬಳ್ಳಿಯ ಊರೆನಿಸಿಕೊಂಡಿದ್ದ ನಗರ ನಂತರದಲ್ಲಿ ಹುಬ್ಬಳ್ಳಿ ಎಂದಾಗಿದೆ. ವಾಣಿಜ್ಯ ಚಟುವಟಿಕೆಗಳ ಕೇಂದ್ರವೆನಿಸಿಕೊಂಡಿರೋ ಹುಬ್ಬಳ್ಳಿಯನ್ನು ಛೋಟಾ ಬಾಂಬೆ ಎಂದೂ ಕರೆಯಲಾಗುತ್ತದೆ. ಹೀಗೆ ಹೂಬಳ್ಳಿಯ ಊರಾಗಿದ್ದ ಹುಬ್ಬಳ್ಳಿ ಛೋಟಾ ಬಾಂಬೆ ಆದ ಕಥಾನಕವನ್ನೊಳಗೊಂಡ ಚಲನಚಿತ್ರ ಇದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಬ್ಬರು ನಾಯಕರನ್ನೊಳಗೊಂಡ ಈ ಚಿತ್ರದಲ್ಲಿ ಸೂರಜ್ ಸಾಸನೂರ ಮತ್ತು ಅಭಿಷೇಕ್ ಜಾಲಿಹಾಳ ನಾಯಕ ನಟರಾಗಿ ನಟಿಸಿದ್ದಾರೆ. ಹೂಬಳ್ಳಿಯಂತಿದ್ದ ಊರು ಹುಬ್ಬಳ್ಳಿಯಾಗಿ ರೂಪುಗೊಂಡಿದ್ದು, ಅಲ್ಲಿ ನಡೆದ ಘಟನೆ, ರೌಡಿಯಿಸಂ, ಅಪರಾಧ ಜಗತ್ತು ಇತ್ಯಾದಿ ಎಲ್ಲವನ್ನೂ ಒಳಗೊಂಡ ಕಥೆಯನ್ನು ಚಿತ್ರ ಹೊಂದಿದೆ. ಹುಬ್ಬಳ್ಳಿಯನ್ನು ಮತ್ತೆ ಹೂಬಳ್ಳಿ ಮಾಡೋ ಪರಿಕಲ್ಪನೆಯೊಂದಿಗೆ ಚಿತ್ರ ಮುಗಿಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹೀರೋ, ಹೀರೋಯಿನ್, ವಿಲನ್, ಸಹ ಪಾತ್ರಧಾರಿಗಳು ಹೀಗೆ ಬಹುತೇಕರು ಉತ್ತರ ಕರ್ನಾಟಕ್ಕೆ ಸೇರಿದವರಾಗಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮುಂಡಗೋಡ ಸೇರಿ ಉತ್ತರ ಕರ್ನಾಟಕದ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಉತ್ತರ ಕರ್ನಾಟಕದ ಕಥೆ, ಉತ್ತರ ಕರ್ನಾಟಕದವರ ಅಭಿನಯ, ಉತ್ತರ ಕರ್ನಾಟಕದವರ ನಿರ್ದೇಶನ ಈ ಚಿತ್ರಕ್ಕಿದೆ ಎಂದರು.
ಆಗಸ್ಟ್‌ನಲ್ಲಿ ಏಕ್ತಾ ಹಿಂದಿಯಲ್ಲಿ ಬಹುಭಾಷಾ ಸಿನೆಮಾ ನಿರ್ಮಿಸಲಾಗುತ್ತಿದೆ. ಇದು ಬಾಲಿವುಡ್ ಸಿನೆಮಾ ಆಗಿದ್ದು, ಬಹುಭಾಷೆಗಳಲ್ಲಿ ತೆರೆ ಕಾಣಲಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಛೋಟಾ ಬಾಂಬೆ ನನ್ನ ಮೂರನೇ ಸಿನೆಮಾ. ಎಲ್ಲ ಚಿತ್ರ ರಚಿಕರಿಗೆ ಈ ಸಿನೆಮಾ ಇಷ್ಟ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಯಕ ನಟ ಸೂರಜ್ ಸಾಸನೂರ ಮಾತನಾಡಿ, ನಾನು ಹುಟ್ಟಿಬೆಳೆದಿದ್ದು ಧಾರವಾಡವಾದರೂ ಮೂಲತಃ ವಿಜಯಪುರದವನು. ಹಾಗಾಗಿ 22 ವರ್ಷದ ನಂತರ ವಿಜಯಪುರಕ್ಕೆ ಆಗಮಿಸಿದ್ದೇನೆ. ಬಹಳ ಖುಷಿ ಎನಿಸಿದೆ. ಛೋಟಾ ಬಾಂಬೆ ಸಿನೆಮಾ ಉತ್ತಮವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸಿ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದರು.
ಸಹಾಯಕ ನಿರ್ದೇಶಕ ದೀಪಕ್ ಬೊಂಗಾಳೆ, ಸಹಾಯಕ ನಿರ್ಮಾಪಕ ಅಸಾದ್ ಖಾನ್, ನಟ ಅಭಿಷೇಕ್ ಜಾಲಿಹಾಳ, ನಟಿ ಪಲ್ಲವಿ ಬಳ್ಳಾರಿ, ಕಲಾವಿದರಾದ ತುಳಜಾರಾಮ ಜಾಧವ, ಕುಮಾರ ರಾಠೋಡ ಸುದ್ದಿಗೋಷ್ಠಿಯಲ್ಲಿದ್ದರು.