ವಿಜಯಪುರ: ಕಾರಂತರ `ಚೋಮನ ದುಡಿ' ದಲಿತ ಸಂವೇದನೆಯ ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದು. ಇದರಲ್ಲಿ ಕಾರಂತರು ಬಹುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಜೀವನ ಚಿತ್ರವನ್ನು ಹೃದಯಸ್ಪರ್ಶಿಯಾಗಿ ಸೆರೆ ಹಿಡಿದಿದ್ದಾರೆ ಎಂದು ಚಡಚಣದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಎಸ್.ಮಾಗಣಗೇರಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಓದುಗರ ಚಾವಡಿ ಮತ್ತು ಜಿಲ್ಲಾ ಯುವ ಪರಿಷತ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಇಪ್ಪತ್ತನೇ ಮಾಸಿಕ ಕೃತಿ ಚಿಂತನೆಯಲ್ಲಿ ಭಾಗವಹಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಚೋಮನದುಡಿ ಕೃತಿ ಪರಿಚಯಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಸ್ಪೃಶ್ಯರಾದ ದಲಿತರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ ಎಂದು ನಾಲ್ಕಾರು ಬೇರೆ ಬೇರೆ ವಿಭಾಗಗಳಿವೆ. ಅವರಲ್ಲಿ ಮೇರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರು ಎನ್ನಲಾದ ಮಾರಿ ದಲಿತರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಿರಲಿಲ್ಲ. ಅವರ ನೆರಳಿನ ಸ್ಪರ್ಶವೂ ಕೂಡದೆನ್ನುವವರೂ ಇದ್ದಾರೆ. ಎಂಜಲು ಅನ್ನವನ್ನು ತಿಂದೋ, ಸತ್ತ ಜಾನುವಾರುಗಳನ್ನು ತಿಂದೋ, ಇಲ್ಲವೇ ನಿಂದನೀಯವಾದ ಇನ್ನಾವ ವ್ಯಕ್ತಿಯಿಂದಲೋ ಅವರ ಜೀವನ ಸಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಸಹಿತ ಕರೆಯುವುದಿಲ್ಲ ಎಂದು ಹೇಳುತ್ತ ನೆರೆದಿದ್ದ ಕೇಳುಗರಿಗೆ ತಿಳಿಯುವಂತೆ ಒಂದು ಗಂಟೆ ವಿವರಿಸಿದರು.
ಉದ್ಘಾಟನೆ ನೆರವೇರಿಸಿದ ಡಾ.ಬಿ.ಎನ್.ಎಂ.ಆಯುರ್ವೇದ ವೈದ್ಯಕೀಯ ಕಾಲೇಜ್ ಸಹಾಯಕ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಿರಾದಾರ ಮಾತನಾಡಿ, ಸೃಜನಶೀಲ ಸಾಹಿತ್ಯದ ಚಟುವಟಿಕೆಗಳು ಅತ್ಯಂತ ಕಡಿಮೆಯಾಗಿರುವುದಲ್ಲದೇ, ಕೆಲವೆಡೆ ಕಾಟಾಚಾರ ಹಾಗೂ ನಾಟಕದ ಸಂಗತಿಗಳಂತಾಗಿ ಹೋಗಿವೆ. ಅಂಥದರಲ್ಲಿ ಚಾವಡಿ ನಿರಂತರವಾಗಿ ಕೇವಲ ಕೃತಿಗಳನ್ನೇ ಪರಿಚಯಿಸುವ ಶ್ರೇಷ್ಠ ಕಾಯಕಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಚಾವಡಿಯ ಅಧ್ಯಕ್ಷ ಬಿ.ಆರ್.ಬನಸೋಡೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಚ್.ಎಲ್.ದೊಡಮನಿ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಆಯೋಜಕ ಮಯೂರ ತಿಳಗೂಳಕರ ಇದ್ದರು. ಸದಾಶಿವ ಚಲವಾದಿ ಪ್ರಾರ್ಥಿಸಿದರು. ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ಯು.ಎನ್.ಕುಂಟೋಜಿ ಸ್ವಾಗತಿಸಿದರು. ರಾಜೇಂದ್ರಕುಮಾರ ಬಿರಾದಾರ ವಂದಿಸಿದರು.