ಚಳ್ಳಕೆರೆ: ನಗರದಲ್ಲಿ ಸ್ಲಂ ಬೋರ್ಡ್ ಯೋಜನೆಯಡಿ ಕೈಗೊಂಡಿರುವ ವಸತಿ ನಿರ್ಮಾಣ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರಸಭೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿ, 16, 17ನೇ ವಾರ್ಡ್‌ನ ಜನತಾ ಕಾಲನಿ, 18ರ ಅಂಬೇಡ್ಕರ್ ನಗರ ಭಾಗದ ಸ್ಲಂ ಕಾಲನಿ ನಿವಾಸಿಗಳಿಗೆ 1127 ಮನೆ ಮಂಜೂರಾತಿ ಮಾಡಿಸಲಾಗಿತ್ತು. ಈವರೆಗೆ 200 ಮನೆಗಳು ಮಾತ್ರ ನಿರ್ಮಾಣವಾಗಿವೆ. ಉಳಿದ ಮನೆಗಳ ಅನುದಾನ ಸರ್ಕಾರಕ್ಕೆ ಹಿಂತಿರುಗಿ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಜನತಾ ಕಾಲನಿ ಮತ್ತು ಅಂಬೇಡ್ಕರ್ ನಗರದಲ್ಲಿನ ನಿವೇಶನಗಳನ್ನು ಅಕ್ರಮ-ಸಕ್ರಮದಡಿ ಸರ್ವೆ ನಡೆಸಿ ಸ್ಥಳೀಯರಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ ಅವರಿಗೆ ಸೂಚಿಸಿದರು.
ಸ್ಲಂ ಬೋರ್ಡ್ ಯೋಜನೆಯ 1127 ಮನೆಗಳ ನಿರ್ಮಾಣಕ್ಕೆ ಕೇವಲ ಜನತಾ ಕಾಲನಿ ಮತ್ತು ಅಂಬೇಡ್ಕರ್ ನಗರ ಗುರುತಿಸಲಾಗಿತ್ತು. ನಿರೀಕ್ಷಿತ ಹಂತದಲ್ಲಿ ಯೋಜನೆ ಸೌಲಭ್ಯ ಬಳಕೆ ಆಗದ ಕಾರಣ, ಇದನ್ನು ವಿವಿಧ ವಾರ್ಡ್‌ಗಳಿಗೆ ವಿಸ್ತರಣೆ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಎಂದು ಪೌರಾಯುಕ್ತ ಪಾಲಯ್ಯ ಅವರಿಗೆ ತಿಳಿಸಿದರು.
ನಗರ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಜಾಗಗಳಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ಕಟ್ಟಿದವರ ಮಾಹಿತಿ ಸಂಗ್ರಹಿಸಿ ಅರ್ಹರಿಗೆ ಅಕ್ರಮ ಸಕ್ರಮ ಯೋಜನೆಯಡಿ ಅನುಕೂಲ ಕಲ್ಪಿಸಿ ಎಂದರು.
ನಗರಸಭೆ ಸದಸ್ಯರಾದ ಟಿ. ಮಲ್ಲಿಕಾರ್ಜುನ, ಬಿ.ಟಿ. ರಮೇಶ್‌ಗೌಡ, ವಿರೂಪಾಕ್ಷಪ್ಪ, ಎಂ.ಜೆ. ರಾಘವೇಂದ್ರ, ವೈ. ಪ್ರಕಾಶ್, ಮುಖಂಡರಾದ ಆರ್. ಪ್ರಸನ್ನಕುಮಾರ್, ಎಸ್. ಮುಜೀಬುಲ್ಲಾ, ಪಾಲಯ್ಯ, ಗಾಂಧಿನಗರ ಕೃಷ್ಣ, ಬೋರಣ್ಣ, ರಮೇಶ್ ಮತ್ತಿತರರಿದ್ದರು.