ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 18.30 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಸಿ.ಎನ್.ರವಿ ತಿಳಿಸಿದರು.
ಸಂಘದ ಆವರಣದಲ್ಲಿ ಸೋಮವಾರ ನಡೆದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಲ್ಲೇ ಸುಮಾರು 20 ಲಕ್ಷ ರೂ. ಗಳಿಗೂ ಹೆಚ್ಚು ಸುಸ್ತಿ ಸಾಲವನ್ನು ವಸೂಲಿ ಮಾಡಲಾಗಿದೆ. ಈ ಸಹಕಾರ ಸಂಘವು ಪ್ರತಿಯೊಬ್ಬ ಸದಸ್ಯರ ಸಹಕಾರದಿಂದ ಲಾಭದ ಹಾದಿಯಲ್ಲಿದ್ದು, ಇದುವರೆವಿಗೂ ಸಂಘವು ಉತ್ತಮ ಆಡಳಿತ ಕಂಡಿದೆ ಎಂದು ತಿಳಿಸಿದರು.
ಸಂಘದ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು, ದುರಸ್ತಿಗೊಳಿಸಲು ಪ್ರತಿಯೊಬ್ಬರೂ ಈ ಸಾಲಿನ ಬೋನಸ್ ಹಣವನ್ನು ಬಿಟ್ಟು ಕೊಡಬೇಕು ಹಾಗೂ ನೀಡಿದ ಸಾಲಕ್ಕೆ ಸಕಾಲದಲ್ಲಿ ಬಡ್ಡಿ ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಭೆಯಲ್ಲಿ ಕೋರಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಚ್.ಟಿ.ಜಗದೀಶ್, ಸಂಘದ ನಿರ್ದೇಶಕರಾದ ಸ್ವಾಮಿಗೌಡ, ಜಿ.ಎನ್.ನಾಗರಾಜ್, ಕೆ.ಜೆ.ಮಲ್ಲಿಕಾರ್ಜುನ, ಬಿ.ಎಸ್.ರಾಮಚಂದ್ರ, ಎಚ್.ಕೆ.ತಮ್ಮೇಗೌಡ, ಬಿ.ಜೆ.ದಿನೇಶ್, ಜಯರಾಮ್, ಚಂದ್ರನಾಯಕ, ಆಶಾ, ಎಸ್.ಎಸ್.ನಾಗು, ಮೇಲ್ವಿಚಾರಕ ಮಹಾದೇವಯ್ಯ, ಸಿಇಒ ಅಭಿಷೇಕ್ ಇದ್ದರು.