ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ಸಿದ್ಧಗಂಗಾ ರಾಷ್ಟ್ರೀಯ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜೂ.21ರಂದು ಮಧ್ಯಾಹ್ನ 3ಕ್ಕೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿರುವ ಬಸವಶ್ರೀ ಫೌಂಡೇಷನ್‌ನ 15ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಚಿತ್ತರಂಜನ್ ಬೋಳಾರ್ ಅವರು ಸಹಕಾರ ಕ್ಷೇತ್ರದ ಜತೆಗೆ ಸಾಮಾಜಿಕ, ಧಾರ್ಮಿಕ ಸಹಿತ ಹಲವು ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಅನೇಕ ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ಸಜ್ಜನ ಚಂದನ ಸದ್ಭಾವನಾ ರಾಜ್ಯ ಪ್ರಶಸ್ತಿ, ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ, ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಐಐಬಿ ಬೆಸ್ಟ್ ಬ್ಯುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ ಸಹಿತ ಹಲವು ಸಹಕಾರ ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಇವರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದಾರೆ. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ, ಸಹಕಾರಿ ಭಾರತಿ ಮಂಗಳೂರು ನಗರ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷರಾಗಿ , ದ. ಕ ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾಗಿ, ದ.ಕ. ಜಿಲ್ಲಾ ಸಗಟು ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.