ಜಿಲ್ಲೆ

ಲಕ್ಷಾಂತರ ಕಲಾಪ್ರೇಮಿಗಳ ಹೃದಯ ಗೆದ್ದ ಚಿತ್ರಸಂತೆ:ಅರ್ಥಗರ್ಭಿತ ಸಂದೇಶ ಸಾರಿದ ಕಲಾಕೃತಿಗಳು

ಬೆಂಗಳೂರು:ನಾಡಿನ ಸಂಸ್ಕೃತಿ, ಧ್ಯಾನಸ್ಥ ಬುದ್ಧ, ಜನಪದ ಸೊಗಡು, ಗ್ರಾಮೀಣ ಬದುಕು, ಕಡಲತೀರದ ಸೌಂದರ್ಯದ ವರ್ಣನೆ, ಪ್ರಕೃತಿ, ಪ್ರಾಣಿಗಳ ಪರಿಕಲ್ಪನೆಯ ಚಿತ್ರ, ವನ್ಯಜಿವಿಗಳು.......

ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರಕೃಪಾ ರಸ್ತೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ "ಚಿತ್ರಸಂತೆ'ಯಲ್ಲಿ ಕಂಡುಬಂದ ಕ್ಯಾನ್ವಾಸ್​ ದಿಬ್ಬಣದ ಚಿತ್ರಣಗಳಿವು.

ಹೆಣ್ಣು ಭ್ರೂಣ ಹತ್ಯೆ'ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ "ಮನೆಗೊಂದು ಚಿತ್ರ' ಎಂಬ ಶೀರ್ಷಿಕೆಯಡಿ ಚಿತ್ರಕಲಾ ಪರಿಷತ್ತು, ಭಾನುವಾರ ಶಿವಾನಂದ ವೃತ್ತದಿಂದ ವಿಂಡ್ಸರ್​ ಮ್ಯಾನರ್​ ಬ್ರಿಡ್ಜ್​ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಆಯೋಜಿಸಿದ್ದ ಚಿತ್ರಸಂತೆ ಅರಶ@ ಕಲಾಜಾತ್ರೆಯಾಗಿ ಪರಿಣಮಿಸಿತ್ತು. ಕಣ್ಣು ಹಾಯಿಸಿದಷ್ಟು ವಿವಿಧ ಕಲಾಕೃತಿಗಳು, ಕ್ಯಾಮರಾದಲ್ಲಿ ಸೆರೆಹಿಡಿಯುವ ಕಾತರದಿಂದ ಕಾಯುತ್ತಿದ್ದ ಕಲಾರಸಿಕರ ಬಾಯಲ್ಲಿ "ವ್ಹಾವ್​' ಎಂಬ ಉದ್ಗಾರ ಹೊಮ್ಮಿತು. ವಿವಿಧ ರಾಜ್ಯಗಳ ವಿಶಿಷ್ಟ ಶೈಲಿಯ ಕಲಾವಿದರ ಕೈಚಳಕದಿಂದ ಮೂಡಿಬಂದ ಕಲಾಕೃತಿಗಳನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಕುಂಚ ಅಥವಾ ಪೆನ್ಸಿಲ್​ನಿಂದ ಕಲಾರಸಿಕರ ಕ್ಯಾರಿಕೇಚರ್​ಗಳನ್ನು ಸ್ಥಳದಲ್ಲೇ ರಚಿಸಿಕೊಟ್ಟು ಮನಗೆದ್ದರು. ಖಾಲಿ ಬಾಟಲ್​, ಪೆನ್ನು, ರೀಫಿಲ್​ಗಳ ಒಳಭಾಗದಲ್ಲಿ ಚಿತ್ರಗಳು ಒಡಮೂಡಿದ್ದವು. 3 ಸಾವಿರ ಬಾಟಲಿಗಳ ಮೇಲೆ ಡಾ.ಅಂಬೇಡ್ಕರ್​, ವಿರಾಟ್​ ಕೊಹ್ಲಿ, ಅಬ್ದುಲ್​ ಕಲಾಂ ಸೇರಿ ನೂರಾರು ಪ್ರಮುಖ ವ್ಯಕ್ತಿಗಳು, ನೆಚ್ಚಿನ ನಟರು,ಜ್ಞಾನಪೀಠ ಪುರಸತರು, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ಕಣ್ಮನ ಸೆಳೆದವು.

ಎರಡು ಜಡೆಯ ಬಾಲಕಿಯ ಚಿತ್ರ ಆಕರ್ಷಣೆ

ಚಿತ್ರಕಲಾ ಆವರಣದ ಪ್ರವೇಶ ದ್ವಾರದಲ್ಲಿ ನಾನಾ ಉಡುಪುಗಳೊಂದಿಗೆ ಪುಟಾಣಿ ಬಾಲಕಿಯ ಸಹಸ್ರಾರು ಚಿತ್ರಗಳನ್ನು ನೇತು ಹಾಕಿ ವಿಶೇಷವಾಗಿ ಅಲಂಕರಿಸಲಾಯಿತು. ಎರಡು ಜಡೆಯ ಬಾಲಕಿಯ ಚಿತ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು, ನೋಡುಗರ ಗಮನ ಸೆಳೆಯಿತು. ಆವರಣದ ಒಳ ಪ್ರವೇಶಿಸುತ್ತಿದ್ದಂತೆಯೇ ಒಂದೆಡೆ ತಲೆಯ ಮೇಲೆ ಕಟ್ಟಿಗೆಗಳ ಹೊರೆಯನ್ನು ಹೊತ್ತೊಯ್ಯುತ್ತಿರುವ ಬಾಲಕಿ, ಕುಲುಮೆ ಕೆಲಸದಲ್ಲಿ ತೊಡಗಿರುವ ವ್ಯಕ್ತಿ, ವಕೀಲೆ, ಚಿತ್ರ ಕಲಾವಿದೆ, ಮಹಿಳಾ ಕ್ರೀಡಾಪಟುಗಳ ಚಿತ್ರಗಳನ್ನು ಒಳಗೊಂಡ ವಿಶೇಷ ಬ್ಯಾನರ್​ ಅಳವಡಿಸಲಾಯಿತು. ಕಲಾಕೃತಿಗಳು ನಿರೀಸಿದಷ್ಟು ಮಾರಾಟ ಆಗಲಿಲ್ಲ. ಚಿಂತ್ರಸಂತೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದರೂ, ಹೆಚ್ಚಿನವರು ಕಲಾಕೃತಿ ಖರೀದಿಸಲು ಉತ್ಸುಕತೆ ತೋರಲಿಲ್ಲ್ಲ. ಕೆಲವರು ಮಾತ್ರ ತಮಗೆ ಇಷ್ಟವಾದ ಕಲಾಕೃತಿ ಖರೀದಿಸಿದರು. ಕಲಾವಿದರು ಕಡಿಮೆ ದರದಲ್ಲಿ ಕಲಾಕೃತಿಯನ್ನು ನೀಡಿರುವುದು ಕಂಡುಬಂತು.

1,400ಕ್ಕೂ ಅಧಿಕ ಮಳಿಗೆಗಳು

ಚಿತ್ರಸಂತೆಯಲ್ಲಿ 1,400ಕ್ಕೂ ಅಧಿಕ ಮಳಿಗೆಗಳಿದ್ದವು. ದೇಶದ ವಿವಿಧ ಭಾಗಗಳಿಂದ 1,500ಕ್ಕೂ ಅಧಿಕ ಕಲಾವಿದರು ತಾವು ರಚಿಸಿದ ಕಲಾಕೃತಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಒಂದೊಂದು ಕಲಾಕೃತಿಗಳು ಕಣ್ಮನ ಸೆಳೆಯುವಂತಿದ್ದವು. ಸಾಂಪ್ರದಾಯಿಕ ಮೈಸೂರು ಶೈಲಿಯ ಕಲೆ, ತಂಜಾವೂರು, ಮಧುಬನಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿದ ಕಲಾಕೃತಿಗಳು, ಆಕ್ರಿಲಿಕ್​, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು, ಕೊಲಾಜ್​, ಲಿಥೋಗ್ರಾಫ್​​, ಡೂಡಲ್​, ಎಂಬೋಸಿಂಗ್​, ವಿಡಿಯೋ ಕಲೆ, ಗ್ರಾಫಿಕ್​, ಶಿಲ್ಪಕಲೆ, ಫೋಟೋಗ್ರಫಿ ಸೇರಿ ಹಲವು ಪ್ರಕಾರದ ಕಲಾಕೃತಿಗಳು ಕುಂಚಜಾತ್ರೆಯಲ್ಲಿ ಮೇಳೈಸಿದ್ದವು. ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪವರೆಗೆ ಉಕ್ಕಿನ ಸೇತುವೆಯ ತಳಭಾಗದಲ್ಲಿ ಅಂಗವಿಕಲರು,ಹಿರಿಯ ನಾಗರಿಕರಿಗಾಗಿ ಕಲಾಕೃತಿಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ತಿಂಡಿ&ತಿನಿಸು ಹಾಗೂ ಇತರ ಅಗತ್ಯ ಸಾಮಗ್ರಿಗಳ ಖರೀದಿ, ಕ್ಯಾಂಟೀನ್​ ವ್ಯವಸ್ಥೆ ಮಾಡಲಾಗಿತ್ತು. ಕೆಲ ಮಳಿಗೆಗಳು ಸ್ಟಿಲ್​ ಬ್ರಿಡ್ಜ್​ ಕೆಳಗೆ ಹಾಗೂ ಸುತ್ತಮುತ್ತ ಇದ್ದವು.ಶಾಂತಿನಿಕೇತನದ ನಂದನ್​ ಮೇಳದ ಮಾದರಿಯಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳು, ಕಲಾವಿದರು ಸೇರಿ ಚಿತ್ರಗಳನ್ನು ಬಿಡಿಸಿದರು. ಕ್ಯಾಲೆಂಡರ್​ಗಳು, ಬುಕ್​ಮಾರ್ಕ್​, ಗ್ರೀಟಿಂಗ್​ ಕಾರ್ಡ್ಸ್​ ಹೀಗೇ ನಾನಾ ರೀತಿಯ ಚಿತ್ರಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಬಿಎಂಟಿಸಿಯಿಂದ ಫೀಡರ್​ ಸೇವೆ

ಚಿತ್ರಸಂತೆಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾನುವಾರ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ವಿಶೇಷ ದರದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಕೆಂಪೇಗೌಡ ಬಸ್​ ನಿಲ್ದಾಣದಿಂದ ಆನಂದರಾವ್​ ಸರ್ಕಲ್​, ಶಿವಾನಂದ ಸ್ಟೋರ್​ ಮಾರ್ಗವಾಗಿ ವಿಧಾನಸೌಧಕ್ಕೆ ಹಾಗೂ ಮಂತ್ರಿಮಾಲ್​ ಮೆಟ್ರೋ ನಿಲ್ದಾಣದಿಂದ ಸೆಂಟ್ರಲ್​ ಟಾಕೀಸ್​, ಶಿವಾನಂದ ಸ್ಟೋರ್​ ಮಾರ್ಗವಾಗಿ ವಿಧಾನಸೌಧಕ್ಕೆ ಮೆಟ್ರೋ ಫೀಡರ್​ ಸಾರಿಗೆ ಸೇವೆ ಒದಗಿಸಿತ್ತು. ಕ್ರೆಸೆಂಟ್​ ರಸ್ತೆ, ರೇಸ್​ಕೋರ್ಸ್​ ರಸ್ತೆ, ಬಿಡಿಎ ಆವರಣ, ರೈಲ್ವೆ ಪ್ಯಾರಲಲ್​ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಯಿತು. 20 ಆಯ್ದ ಸ್ಥಳಗಳಲ್ಲಿ ಮೊಬೈಲ್​ ಶೌಚಗೃಹ ನಿರ್ಮಿಸಲಾಗಿತ್ತು. ಸಂಚಾರಿ ಎಟಿಎಂ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಬುಗ್ಗಿ ವಾಹನ ಸೌಲಭ್ಯ ಕಲ್ಪಿಸಲಾಗಿತ್ತು.

101 ಪ್ರಸಿದ್ಧ ವ್ಯಕ್ತಿಗಳು

ಚಿತ್ರಸಂತೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಒಂದೇ ಫ್ರೇಮ್​​ನಲ್ಲಿ ರಚಿಸಿರುವ 101 ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು ನೋಡುಗರ ಗಮನ ಸೆಳೆಯುತ್ತಿತ್ತು. ಕೊಯಮತ್ತೂರಿನ ಕಲಾವಿದ ಸತೀಶ್​ ಎಂಬುವರು ವಿವಿಧ ಕ್ಷೇತ್ರಗಳಲ್ಲಿ ಸಾಧನೈಗೆದ ವ್ಯಕ್ತಿಗಳ ಚಿತ್ರಗಳನ್ನು ಒಂದೇ ಚಿತ್ರದಲ್ಲಿ ಬಿಡಿಸಲು 6 ತಿಂಗಳು ತೆಗೆದುಕೊಂಡಿದ್ದಾರೆ.ಈ ಚಿತ್ರಕ್ಕೆ 4 ಲಕ್ಷ ರೂ. ನಿಗದಿಪಡಿಸಲಾಗಿದೆ. ಸಾರ್ವಜನಿಕರು ಈ ಚಿತ್ರದ ಮುಂಭಾಗ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.