ಜಿಲ್ಲೆ

ವಿದೇಶಿ ಮಾದರಿಯಲ್ಲಿ ರಾಜ್ಯದಲ್ಲೂ ಆರ್ಟ್ ಗ್ಯಾಲರಿ

ಪಂಕಜ ಕೆ.ಎಂ.

ಬೆಂಗಳೂರು: ಚಿತ್ರಕಲೆ ಪ್ರದರ್ಶನಕ್ಕೆ ವಿದೇಶದಲ್ಲಿ ಶಾಶ್ವತ ಆರ್ಟ್ ಗ್ಯಾಲರಿಗಳಿದ್ದು,ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಗ್ಯಾಲರಿಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಹಮ್ಮಿಕೊಂಡ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾ ಸಾಧಕರಾದ ಪ್ರೊ. ವಸುಧಾ ತೋಜುರ್ ಅವರಿಗೆ ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ, ಪ್ರೊ.ಬಿ.ವಿ. ಸುರೇಶ್ ಅವರಿಗೆ ಎಂ. ಆರ್ಯಮೂರ್ತಿ ಪ್ರಶಸ್ತಿ, ಎಲ್.ಎನ್. ತಲ್ಲೂರ್ ಅವರಿಗೆ ಡಿ. ದೇವರಾಜ ಅರಸು ಪ್ರಶಸ್ತಿ ಹಾಗೂ ಬಿ.ಬಿ. ರಾಘವೇಂದ್ರ ಅವರಿಗೆ ವೈ. ಸುಬ್ರಮಣ್ಯರಾಜು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ವಿದೇಶಕ್ಕೆ ಹೋದಾಗ ಅಲ್ಲಿ ಶಾಶ್ವತ ಗ್ಯಾಲರಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಪ್ರವೇಶ ಶುಲ್ಕ ಪಾವತಿಸಿ, ಹೋಗಬೇಕಾಗುತ್ತದೆ. ಕಲೆಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಸರ್ಕಾರದ್ದು, ಈ ನಿಟ್ಟಿನಲ್ಲಿ ವಿದೇಶಿ ಗ್ಯಾಲರಿಗಳ ಮಾದರಿಯಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಗ್ಯಾಲರಿಗಳನ್ನು ನಿರ್ಮಿಸುವ ಅಗತ್ಯವಿದೆ ಎಂದರು.

ಕಲೆ ಮತ್ತು ಸಂಸ್ಕೃತಿಯಲ್ಲಿ ರಾಜ್ಯ ಶ್ರೀಮಂತವಾಗಿದ್ದು, ಜಿಲ್ಲೆಗೊಂದು ಕಲೆ ಮತ್ತು ಸಂಸ್ಕೃತಿಯ ವೈವಧ್ಯತೆಯನ್ನು ಕಾಣಬಹುದಾಗಿದೆ. ಈ ಕಲೆಗಳ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಲು ಗ್ಯಾಲರಿಗಳನ್ನು ನಿರ್ಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಸಲ್ಲಿಸಿರುವ ಪ್ರಸ್ತಾವವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.

ಕಲೆ ಮತ್ತು ಸಂಸ್ಕೃತಿಯಲ್ಲಿ ಜಾತಿ ಧರ್ಮದ ಹಸ್ತಕ್ಷೇಪ ಇದಿದ್ದರೆ ಅವು ಉಳಿಯುತ್ತಲೇ ಇರಲಿಲ್ಲ. ಕಲೆಯನ್ನು ಉಳಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸಗಳು ಆಗಬೇಕು. ಹಿಂದೆ ರಾಜ ಮಹಾರಾಜರು ಕಲೆಯನ್ನು ಪೋಷಿಸುತ್ತಿದರು. ಈಗ ಆ ಜವಾಬ್ದಾರಿ ಸರ್ಕಾರದ ಮೇಲಿದೆ. ಆಧುನಿಕ ಜಗತ್ತಿನಲ್ಲಿ ಕಲೆ ನಾಶವಾಗುವ ಅಪಾಯವನ್ನು ಎದುರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ನಾಲ್ಕು ದಿಕ್ಕಿನಲ್ಲೂ ಗ್ಯಾಲರಿ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ಜನರಿಗೆ ಕಲೆಯನ್ನು ತಲುಪಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಚಿತ್ರಸಂತೆ ನಡೆಸಿಕೊಂಡು ಬರಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಸಾಂಪ್ರದಾಯಿಕ ಕಲೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಕಲೆಗಳ ಉಳಿವು ಹಾಗೂ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ಗ್ಯಾಲರಿಗಳ ಸಮಸ್ಯೆ ಕಾಡುತ್ತಿದ್ದು, ಸರ್ಕಾರ ನಗರದ ನಾಲ್ಕೂ ದಿಕ್ಕಿನಲ್ಲಿ ಗ್ಯಾಲರಿಯನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಆಯಾ ಜಿಲ್ಲೆಗಳಲ್ಲಿನ ಐತಿಹ್ಯ ಸೆರೆಹಿಡಿಯುವ ವ್ಯವಸ್ಥೆ ರಾಜ್ಯದಲ್ಲಿಲ್ಲ. ಅದೇ ವಿದೇಶಗಳಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಅಲ್ಲಿನ ಕಲೆ, ಸಂಸ್ಕೃತಿ, ಐತಿಹ್ಯ ಸೇರಿ ಹಲವು ವಿಶೇಷತೆಗಳ ಮಾಹಿತಿ ದೊರೆಯಲಿವೆ. ಅದೇ ರೀತಿ ಮಾಹಿತಿ ಸಂಗ್ರಹಿಸುವ ಕಾರ್ಯ ರಾಜ್ಯದಲ್ಲೂ ಆಗಬೇಕು ಎಂದರು.