ಬಿತ್ತನೆಗೆ ಸಿದ್ಧವಾಗಿರುವ ಜಮೀನು. 
ಜಿಲ್ಲೆ

ಮಳೆಯ ನಿರೀಕ್ಷೆಯಲ್ಲಿ ಅನ್ನದಾತ: ಒಣಗಿ ಹೋಗುತ್ತಿದೆ ಬಿತ್ತನೆ ಬೀಜ, ಆತಂಕದಲ್ಲಿ ಅನ್ನದಾತ

Chikkaballapur

ಚಿಕ್ಕಬಳ್ಳಾಪುರ: ಬಿತ್ತನೆಯ ಬಳಿಕ ನಿರಂತರ ಮಳೆಯ ಬಿಡುವಿನಿಂದ ಮೊಳಕೆಯಲ್ಲಿಯೇ ಬೀಜ ಒಣಗಿ ಹೋಗುವ ಆತಂಕ ರೈತರಲ್ಲಿ ಮೂಡಿದ್ದು, ವರುಣರಾಯನ ಕೃಪೆಗೆ ಎದುರು ನೋಡುತ್ತಿದ್ದಾರೆ.


ಭೂಮಿ ಹದ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿದು ಬಿತ್ತನೆಯ ಕಾರ್ಯ ಮುಂದೂಡಲ್ಪಟ್ಟಿತ್ತು. ಇದೀಗ ತೇವಾಂಶವಿಲ್ಲದ ಮಣ್ಣಿನಲ್ಲಿ ಬೀಜ ಒಣಗಿ ಹೋಗುವ ಲಕ್ಷಣಗಳು ಗೋಚರವಾಗುತ್ತಿವೆ. ಹಾಗಾಗಿ ಸಮರ್ಪಕ ಮಳೆ ಬೀಳಬೇಕೆಂಬ ಮಾತು ಕೇಳಿ ಬರುತ್ತಿದೆ.


ಪ್ರಸಕ್ತ ಸಾಲಿನಲ್ಲಿ 1,51,954 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ಈ ಪೈಕಿ ಇಲ್ಲಿಯವರೆಗೂ ಶೇ.54ರಷ್ಟು ಮಾತ್ರ ಸಾಧನೆಯಾಗಿದೆ. ಇದರ ಮತ್ತಷ್ಟು ಪ್ರಗತಿ, ಬಿತ್ತನೆ ಬೀಜದ ಸಂರಕ್ಷಣೆಯು ಮುಂಬರುವ ದಿನಗಳಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಆವಲಂಬಿಸಿದೆ.


ಮುಂಗಾರು ಅವಧಿಯಲ್ಲಿ ಒಳ್ಳೆಯ ಮಳೆಯಾಗಿ, ಜೂನ್ ಮೊದಲ ವಾರದಿಂದಲೇ ಬಿತ್ತನೆ ಪ್ರಾರಂಭವಾಗಬೇಕಾಗಿತ್ತು. ಆದರೆ, ಧಾರಾಕಾರ ಮಳೆಗೆ ಅಡ್ಡಿಯಾಯಿತು. ಜೂನ್‌ನಲ್ಲಿ 64.1 ವಾಡಿಕೆ ಮಳೆಗೆ 149.3, ಜುಲೈನಲ್ಲಿ 85.5 ವಾಡಿಕೆ ಮಳೆಗೆ 116.5 ಮಿ.ಮೀ ಮಳೆ ಬಿದ್ದು ಭೂಮಿ ಹದ, ಬಿತ್ತನೆಯು ವಿಳಂಬವಾಗಿದ್ದು, ಬಹುತೇಕ ಜುಲೈ ಕೊನೆ ವಾರದಿಂದ ಚುರುಕುಗೊಂಡಿತು. ಇನ್ನು ಆಗಸ್ಟ್‌ನ ಎರಡನೇ ವಾರದಿಂದ ಮಳೆ ಸಮರ್ಪಕವಾಗಿ ಬಿದ್ದಿಲ್ಲ. ಅಲ್ಲಲ್ಲಿ ಸುರಿದು, ಮತ್ತೆ ಹಲವು ಭಾಗಗಳಲ್ಲಿ ಕೈ ಕೊಟ್ಟಿದೆ. ಕಳೆದ 20 ದಿನಗಳಿಂದಲೂ ಮಣ್ಣಿನ ತೇವಾಂಶ ಕುಸಿದು, ಬಿತ್ತನೆ ಬೀಜ ಒಣಗಿ ಹೋಗುತ್ತಿದೆ.


ಮಳೆಗಾಗಿ ಕಾಯುವಿಕೆ: ಈಗಾಗಲೇ ಹವಾಮಾನ ಇಲಾಖೆಯು ಈ ವಾರದಲ್ಲಿ ಉತ್ತಮ ಮಳೆಯಾಗುವ ಸೂಚನೆ ನೀಡಿದೆ. ಬೇರೆ ಬೇರೆ ಭಾಗಗಳಲ್ಲಿ ವರುಣರಾಯ ಅಬ್ಬರಿಸುತ್ತಿದ್ದಾನೆ. ಆದರೆ, ಇಲ್ಲಿ ಆಗಾಗ ಮೋಡ ಮುಸುಕಿದ ವಾತಾವರಣ, ತುಂತುರು ಹನಿಗಳ ಸಿಂಚನ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಏಕದಳ ಧಾನ್ಯದ 1,04,728 ಗುರಿ ಪೈಕಿ 46,163, ದ್ವಿದಳ ಧಾನ್ಯ 19,434 ಗುರಿ ಪೈಕಿ 6314, ಎಣ್ಣೆ ಕಾಳುಗಳ 27530 ಗುರಿ ಪೈಕಿ 14033, ವಾಣಿಜ್ಯ 262 ಗುರಿ ಪೈಕಿ 104 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಸಾಧನೆಯಾಗಿದೆ. ಮತ್ತಷ್ಟು ಗುರಿ ಸಾಧಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ಮಳೆಯಾಗಬೇಕಿದ್ದು, ಇಲ್ಲದಿದ್ದಲ್ಲಿ ಮಣ್ಣಿನಲ್ಲಿ ಬಿತ್ತನೆ ಬೀಜ ಒಣಗಿ ಹೋಗಿ, ಮತ್ತೆ ಹೊಸದಾಗಿ ಬಿತ್ತನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.


ಇತ್ತೀಚಿಗೆ ಸುರಿದ ಮಳೆಗೆ ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಕೊಳವೆ ಬಾವಿಯಲ್ಲಿ ಸಮೃದ್ಧಿ ನೀರು ಲಭ್ಯವಿದೆ. ಇದರ ನಡುವೆ ಮಳೆಯಾಶ್ರಿತ ಕೃಷಿಯನ್ನು ನೆಚ್ಚಿಕೊಂಡಿರುವ ಸಣ್ಣ ಹಿಡುವಳಿ ರೈತರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಶೇ.70 ರಷ್ಟು ಸಾಧನೆ ಬಿತ್ತನೆಯಾಗಬೇಕಾಗಿತ್ತು. ಆದರೆ, ಇದರಲ್ಲಿ ಹಿನ್ನಡೆ ಕಂಡು ಬಂದಿದೆ.

ಈಗಾಗಲೇ ನೆಲಗಡಲೆ ಮತ್ತು ತೊಗರಿ ಬಿತ್ತನೆ ಅವಧಿ ಮುಗಿದಿದೆ. ಮುಸುಕಿನ ಜೋಳ, ರಾಗಿ, ಅಲಸಂದಿ ನವಣೆ ಸೇರಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆಯುತ್ತಿದೆ. ಇದು ಚೆನ್ನಾಗಿ ಮೊಳಕೆ ಬರಲು ಮಳೆಯಾಗಬೇಕು. ಆದರೆ, ಈಗ ಮೋಡ ಮುಸುಕಿದ ವಾತಾವರಣ ಮಾತ್ರ ಕಂಡು ಬರುತ್ತಿದೆ ಆದರೆ ಮಳೆ ಬೀಳುತ್ತಿಲ್ಲ.
| ಮುನಿಕೃಷ್ಣಪ್ಪ ರೈತ ಚಿಕ್ಕಬಳ್ಳಾಪುರ