ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮಲ್ಲಿ ಎಸ್.ಆರ್.ಗಿರೀಶ್, ಶಿವಶಂಕರ್ ಪಾಳೇಗಾರ್, ಮಹೇಶ್ವರಪ್ಪ, ಲಕ್ಷ್ಮಣ ಇತರರಿದ್ದರು.
- ಎಸ್. ಆರ್. ಗಿರೀಶ್ ಮಾಹಿತಿ
- ಆರೋಗ್ಯ ಕಾರ್ಡ್ ವಿತರಣೆ
ಚಿಕ್ಕಜಾಜೂರು: ಯಶಸ್ವಿನಿ ಆರೋಗ್ಯ ಕಾರ್ಡ್ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಹೈಟೆಕ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಸ್.ಆರ್. ಗಿರೀಶ್ ಹೇಳಿದರು.
ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ವಸುಂದರಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಉಚಿತ ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡ ಹಾಗೂ ಮಧ್ಯಮ ವರ್ಗದ ಜನರು ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಸಾಧ್ಯ. ಇದನ್ನು ಮನಗಂಡ ಸರ್ಕಾರ ಎಲ್ಲ ವರ್ಗದ ಕುಟುಂಬಗಳಿಗೆ ಐದು ಲಕ್ಷ ರೂ.ಗಳವರೆಗೆ ನೋಂದಾಯಿತ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರು ಪಟ್ಟಣ ಪ್ರದೇಶಗಳಿಗೆ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಅನೇಕ ಸಂಘ ಸಂಸ್ಥೆಗಳು ಉಚಿತವಾಗಿ ಟೈಲರಿಂಗ್, ಕಸೂತಿ ಸೇರಿ ಸ್ವಯಂ ಉದ್ಯೋಗಾಧಾರಿತ ತರಬೇತಿ ನೀಡುತ್ತಿವೆ. ಇಂತಹ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಶಂಕರ್ ಪಾಳೇಗಾರ್ ಮಾತನಾಡಿದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಮಹೇಶ್ವರಪ್ಪ, ರಾಮಗಿರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಕ್ಷ್ಮಣ, ನಿರ್ದೇಶಕರಾದ ಎನ್.ಆರ್. ತಿಪ್ಪೇಸ್ವಾಮಿ, ಚಂದ್ರಪ್ಪ, ಮಾಳಿಗೆಪ್ಪ, ಮಂಜಪ್ಪ, ಚೇತನ, ಹೊನ್ನೇಶ್, ಮೇಲ್ವಿಚಾರಕ ಪೃಥ್ವಿ ಅಂಗಡಿ, ಗ್ರಾಪಂ ಮಾಜಿ ಅಧ್ಯಕ್ಷ ಷಣ್ಮುಖಪ್ಪ, ಸದಸ್ಯ ಸಿದ್ದೇಶ್ ಯಾದವ್, ವಸುಂದರ ಫೌಂಡೇಶನ್ ಕಾರ್ಯದರ್ಶಿ ಮಮತಾ, ಭಾಗ್ಯಾ ಇದ್ದರು.
ಇದೇ ಸಂದರ್ಭದಲ್ಲಿ ಟೈಲರಿಂಗ್ ಸೇರಿ ವಿವಿಧ ಉಚಿತ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ಹಾಗೂ ಯಶಸ್ವಿನಿ ಯೋಜನೆ ಪಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು.