ಮೊಳಕಾಲ್ಮೂರು ತಾಲೂಕಿನಲ್ಲಿ ಸುರಿದ ಹದ ಮಳೆಗೆ ರೈತರು ಶೇಂಗಾ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು. sowing 
ಚಿತ್ರದುರ್ಗ

ವರುಣ ಕೃಪೆ, ಶೇಂಗಾ ಬಿತ್ತನೆಗೆ ಹೊರಟ ರೈತರು sowing

ಪ್ರಮುಖ ಮುಖ್ಯಾಂಶಗಳು

  • ಮೊಳಕಾಲ್ಮೂರು ತಾಲೂಕಿನ ವಿವಿಧೆಡೆ ಹದ ಮಳೆ
  • ಅನ್ನದಾತರಲ್ಲಿ ಸಂತಸ
ಮೊಳಕಾಲ್ಮೂರು: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮುಂದೇನು ಎನ್ನುವಷ್ಟರಲ್ಲಿ ಸೋಮವಾರ ಸಂಜೆ ತಾಲೂಕಿನ ಹಲವಡೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ರೈತಾಪಿ ವರ್ಗದಲ್ಲಿ ಸಂಭ್ರಮ ಮೂಡಿಸಿದೆ. sowing
ಕೃಷಿ ಭೂಮಿ ತೇವಾಂಶ ಕಾಣುತ್ತಿದ್ದಂತೆ ಬೀಜ, ಗೊಬ್ಬರ ಸಿದ್ಧ ಮಾಡಿಕೊಂಡಿದ್ದ ಅನ್ನದಾತರು ಮಂಗಳವಾರ ಬೆಳಗ್ಗಿಯಿಂದಲೇ ಟ್ರ್ಯಾಕ್ಟರ್ ಮೂಲಕ ಶೇಂಗಾ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ, ರಾಂಪುರ ಹೊರತುಪಡಿಸಿ ಉಳಿದಂತೆ ಬಹುತೇಕ ಕಡೆಗಳಲ್ಲಿ ಸೋಮವಾರ ಸುರಿದ ಮಳೆ ಬಿತ್ತನೆಗೆ ಅನುಕೂಲಕರವಾಗಿದೆ. ಅರ್ಧ ಅಡಿಯಷ್ಟು ಭೂಮಿ ತೊಯ್ದಿರುವ ಹಿನ್ನಲೆಯಲ್ಲಿ ಬಿತ್ತನೆ ಆರಂಭಿದ್ದಾರೆ.
ಶೇಂಗಾ ಬಿತ್ತನೆಗೆ ಇನ್ನೊಂದು ವಾರ ಮಾತ್ರ ಅವಕಾಶವಿದೆ. ಆನಂತರ ಹಿಂಗಾರು ಬೆಳೆಗಳ ಬಿತ್ತಲೆ ಶುರುವಾಗಲಿದೆ. ಕಳೆದ 20 ದಿನಗಳಿಂದ ಮೋಡ ಕವಿದ ವಾತಾವರಣವಿದ್ದರೂ ಮಳೆ ಆಗಿರಲಿಲ್ಲ. ಮಳೆರಾಯ ಕೊನೆಗೂ ಕೃಪೆ ತೋರಿದ ಕಾರಣ ಅನ್ನದಾತರು ತುಸು ನಿಟ್ಟಿಸಿರು ಬಿಟ್ಟಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಆರಂಭದಲ್ಲಿ 2 ಸಾವಿರ ಎಕೆರೆಯಲ್ಲಿ ಬಿತ್ತನೆ ಮಾಡಿದ್ದ ತೊಗರಿ ಮಳೆ ಇಲ್ಲದೆ ಬಾಡುತ್ತಿತ್ತು. ಚಿಕ್ಕಪುಷ್ಯ ಮಳೆ ಅನುಗ್ರಹ ತೋರಿದ್ದರಿಂದ ಬೆಳೆಗಳಿಗೆ ಮರುಜೀವ ಬಂದಂತಾಗಿದೆ.
ಕೊಳವೆ ಬಾವಿ ಆಶ್ರಯದಲ್ಲಿ ಕೆಲ ರೈತರು ಹತ್ತಿ ಬೆಳೆ ಇಟ್ಟು ಹಾರೈಕೆ ಮಾಡಿದ್ದರಾದರೂ ಮಳೆ ಕೊರತೆಯಿಂದ ಅಷ್ಟಾಗಿ ಇಳುವರಿ ಬಂದಿಲ್ಲ.

ಈ ವರ್ಷ ಬರಗಾಲದ ಮುನ್ಸೂಚನೆ ಇತ್ತು. ಸೋಮವಾರ ಸುರಿದ ಮಳೆಯಿಂದ ರೈತರು ಶೇಂಗಾ ಬಿತ್ತಲಾರಂಭಿಸಿದ್ದಾರೆ. ಕೃಷಿ ಇಲಾಖೆಯಿಂದ 1250 ಕ್ವಿಂಟಾಲ್ ಮಾತ್ರ ಶೇಂಗಾ ಬಿತ್ತನೆ ಬೀಜ ಖರೀದಿಸಲಾಗಿದೆ. ಪ್ರತಿ ವರ್ಷ 3-4 ಸಾವಿರ ಕ್ವಿಂಟಾಲ್ ಖರ್ಚಾಗುತ್ತಿತ್ತು. ಹಿಂಗಾರಿನಲ್ಲಿ ಉತ್ತಮ ಮಳೆ ಬಂದಲ್ಲಿ ಸಜ್ಜೆ, ನವಣೆ, ಸಾವೆ, ಸೂರ್ಯಕಾಂತಿ, ಇತ್ಯಾದಿ ಬೆಳೆ ಹಾಕಲು ರೈತರು ಸಜ್ಜಾಗಬೇಕು.

— ಡಾ. ಮಂಜುನಾಥ ಕೃಷಿ ಇಲಾಖೆ