ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚಿತ್ರ  
ಚಿತ್ರದುರ್ಗ

ಬಯಲು ಸೀಮೆಯ ರೈತರ ಹೋರಾಟಕ್ಕೆ ಸ್ಪಂದಿಸುವುರೇ ಸಿದ್ದರಾಮಯ್ಯ?

ಪ್ರಮುಖ ಮುಖ್ಯಾಂಶಗಳು

  • ಅಡಕೆ ಹನಿ ನೀರಾವರಿಗೆ ಸಹಾಯಧನ ಯೋಜನೆ
  • ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬೇಕಿದೆ ಸಿಎಂ ಭರವಸೆ
  • ಸೂಕ್ಷ÷್ಮನೀರಾವರಿ ಸೌಲಭ್ಯ
ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಸೂಕ್ತ ಅನುದಾನದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕಾಗಿ ಒತ್ತಾಯಿಸಿ ತೀವ್ರವಾಗುತ್ತಿರುವ ರೈತರ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.೬ ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಸ್ಪಂದಿಸುತ್ತಾರೆಯೇ?
ಚಿತ್ರದುರ್ಗ ಜಿಲ್ಲೆಯ ಎಲ್ಲ ಆರು, ದಾವಣಗೆರೆಯ ಒಂದು, ಚಿಕ್ಕಮಗಳೂರಿನ ಎರಡು, ತುಮಕೂರಿನ ಮೂರು ಸಹಿತ ೪ ಜಿಲ್ಲೆಗಳ ೧೨ ತಾಲೂಕುಗಳ ವ್ಯಾಪ್ತಿಯ ೨,೨೫,೫೧೫ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ÷್ಮನೀರಾವರಿ ಸೌಲಭ್ಯ ಒದಗಿಸುವ, ೩೬೭ ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆ ವೆಚ್ಚವೀಗ ೨೧,೧೬೭ ಕೋಟಿ ರೂ.ಗೆ ತಲುಪಿದೆ. ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಈವೆರೆಗೆ ಅಂದಾಜು ೧೧,೪೦೯ ಕೋಟಿ ರೂ.ಖರ್ಚಾಗಿದ್ದು, ಯೋಜನೆ ಪೂರ್ಣಗೊಳಿಸಲು ಅಂದಾಜು ೧೦ ಸಾವಿರ ಕೋಟಿ ರೂ. ಅಗತ್ಯವಿದೆ.

ಈ ಬಜೆಟ್‌ನಲ್ಲಿ ಕನಿಷ್ಠ ೫ ಸಾವಿರ ಕೋಟಿ ರೂ. ಹಾಗೂ ಕೇಂದ್ರ ನೀಡಿದ ಭರವಸೆಯಂತೆ ೫೩೦೦ ಕೋಟಿ ರೂ.ಬಿಡುಗಡೆ ಮಾಡಿದರೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಿಎಂ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದಾರೆ. ಐದು ಸಾವಿರ ಕೋಟಿ ರೂ.ಗಳೊಂದಿಗೆ ಚಿತ್ರದುರ್ಗ ತಾಲೂಕು ಗೋನೂರು ಆಕ್ವಾಡೆಕ್‌ಗೆ ಪ್ರಾಯೋಗಿಕ ನೀರು ಹರಿಸಲು ತುರ್ತಾಗಿ ೩೦೦ ಕೋಟಿ ರೂ. ಬಿಡುಗಡೆಗೂ ಒತ್ತಾಯಿಸಿದ್ದಾರೆ.
ಚಳ್ಳಕೆರೆ ತಾಲೂಕು ಸಾಣೀಕೆರೆ ಬಳಿ ಅಂದಾಜು ೯೫ ಎಕರೆ ಜಾಗದಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ ಆಗಬೇಕಿದೆ. ಹಿರಿಯೂರಿನ ಸಹಕಾರಿ ಸಕ್ಕರೆ ಕಾರ್ಖಾನೆ ಮರು ಆರಂಭವಾಗಬೇಕಿದೆ. ವಾಣಿವಿಲಾಸ ಜಲಾಶಯದ ಎಡ ಮತ್ತು ಬಲ ನಾಲೆಗಳ ಆಧುನೀಕರಣದ ಬೇಡಿಕೆ ಇದೆ. ಹಿರಿಯೂರು ಮೇಟಿಕುರ್ಕೆ ಕೈಗಾರಿಕೆ ಕಾರಿಡಾರ್, ಜಿಲ್ಲೆಯ ಯುವಜನರಿಗೆ ಉದ್ಯೋಗಾವಕಾಶಕ್ಕಾಗಿ ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ.
ಮೊಳಕಾಲ್ಮೂರಿಗೆ ಘೋಷಿಸಿದ್ದ ೨೦೦ ಹಾಸಿಗೆಗಳ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಈಚೆಗೆ ಸ್ಥಳ ಪರಿಶೀಲನೆ ನಡೆಸಿ, ತಮ್ಮ ಕಚೇರಿಯಲ್ಲಿ ಸಭೆಯನ್ನೂ ನಡೆಸಿದ್ದರು. ಆದರೆ ಆಸ್ಪತ್ರೆ ನಿರ್ಮಾಣ ಯಾವಾಗ ಎಂಬುದಕ್ಕೆ ಉತ್ತರ ಸಿಗಬೇಕಿದೆ.
ಜಿಲ್ಲೆಯ ತೆಂಗು ಬೆಳೆಗಾರರ ಅನುಕೂಲಕ್ಕಾಗಿ ಹೊಸದುರ್ಗದಲ್ಲಿ ಕೊಬ್ಬರಿ ಮಾರುಕಟ್ಟೆ, ಗೋದಾಮು ನಿರ್ಮಾಣದ ಅಗತ್ಯವಿದೆ. ವಿವಿ ಸಾಗರದ ಹಿನ್ನೀರು ಪ್ರದೇಶದ ಜನರು ಕೋಡಿ ನೀರಿನಿಂದ ಅನುಭವಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ಮಲೆನಾಡಿಗೆ ಸೀಮಿತವಾಗಿರುವ ಅಡಕೆಗೆ ಹನಿ ನೀರಾವರಿ ಸಹಾಯಧನ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಗೂ ವಿಸ್ತರಿಸ ಬೇಕಿದೆ. ಇದು ಹಲವು ವರ್ಷಗಳಿಂದ ನನೆಗುದಿಯಲ್ಲಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಹಲವು ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಸಿಗಬೇಕಿದೆ.
ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ
ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಬದ್ಧತೆ ಪ್ರದರ್ಶಿಸಬೇಕಿದೆ. ಸ್ವಯಂ ಚಾಲಿತ
ಪರೀಕ್ಷಾ ಪಥಕ್ಕೆ ೨೫ ಲಕ್ಷ ರೂ.ಅನುದಾನದೊಂದಿಗೆ ಸ್ಥಳ ಗುರುತಿಸಲಾಗಿದ್ದು, ಅಗತ್ಯ ಅನುದಾನ ಬಿಡುಗಡೆ ಆಗಬೇಕಿದೆ.
ಡಿಸಿ ಕಚೇರಿ ಹೊಸ ಕಟ್ಟಡವೀಗ ನಗರದೊಳಗೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕೂ ನೂರಾರು ಕೋಟಿ ರೂ.ಅನುದಾನ ಹೊಂದಿಸುವುದು ಅನಿವಾರ್ಯವಾಗಿದೆ. ಕ್ಯಾಮರಾಗಳ ಅಳವಡಿಕೆ ಭರವಸೆ ಈಡೇರಿಲ್ಲ. ಚಳ್ಳಕೆರೆಯಲ್ಲಿ ಹೊಸ ಠಾಣೆಗಳ ಸ್ಥಾಪನೆ ಆಗುವುದೇ?
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಆಗಬೇಕಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೂ ಚುರುಕು ಮುಟ್ಟಿಸಬೇಕಿದೆ. ಕಳೆದ ಬಜೆಟ್‌ನಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸುವುದಾಗಿ ಹೇಳಿದ್ದ ಟ್ರಾಮಾ ಸೆಂಟರ್ ಸ್ಥಾಪನೆಗೆ ಒಮ್ಮೆ ಸ್ಥಳ ಪರಿಶೀಲನೆ ನಡೆಸಿರುವುದು ಬಿಟ್ಟರೆ ಇನ್ಯಾವುದೇ ಪ್ರಗತಿ ಆಗಿಲ್ಲ.
ನಿರೀಕ್ಷಿಸುವಂತಿಲ್ಲ ಹೊಸ ತಾಲೂಕು
ಕೇಂದ್ರದ ಜನಗಣತಿ ಪೂರ್ಣಗೊಳ್ಳದೆ ಹೊಸ ಜಿಲ್ಲೆ, ತಾಲೂಕು ರಚನೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಪರಶುರಾಮಪುರ, ಭರಮಸಾಗರ, ಧರ್ಮಪುರ ತಾಲೂಕುಗಳ ಬೇಡಿಕೆ ಮತ್ತೆ ನನೆಗುದಿಗೆ ಬಿದ್ದಂತಾಗಿದೆ.
ಜಿಲ್ಲೆಗೆ ಮತ್ತೊಂದು ಉಪವಿಭಾಗಾಽಕಾರಿ ಕಚೇರಿ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ. ದುರ್ಗದ ಐತಿಹಾಸಿಕ ಕೋಟೆ ಸಹಿತ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ಚರ್ಮ ಆಧಾರಿತ ಉದ್ಯಮಗಳ ಸ್ಥಾಪನೆ, ಶೇಂಗಾ ಮೌಲ್ಯವರ್ಧನೆಗೆ ಒತ್ತು ಸಿಗಬೇಕಿದೆ. ಅಪಘಾತಗಳನ್ನು ನಿಯಂತ್ರಿಸಲು ಅತ್ಯಾಧುನಿಕ ಟ್ರಕ್ ಟರ್ಮಿನಲ್ ಅಗತ್ಯವಿದೆ.