ಹೊಸದುರ್ಗ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಉಂಟಾದ ಕಲಹದಲ್ಲಿ, ಬಿಡುಗಡೆ ಕೇಳಿದರೂ ಕೊಡಲು ನಿರಾಕರಿಸಿದ ಪತ್ನಿಯನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಟನೆ ಗುರುವಾರ ಹಿರಿಯೂರು ರಸ್ತೆಯ ಕೆಎಸ್ಆರ್ಟಿಸಿ ಬಸ್ ಡಿಪೋ ಹಿಂಭಾಗದ ತೋಟದಲ್ಲಿ ಸಂಭವಿಸಿದೆ. ತಾಯಿ ಕೊಲೆಯಾದರೆ, ತಂದೆ ಕೊಲೆ ಆರೋಪದ ಮೇಲೆ ಜೈಲುಪಾಲಾಗಿದ್ದಾನೆ. ಈ ದಂಪತಿಯ ನಾಲ್ಕು ವರ್ಷ ಮತ್ತು 2 ವರ್ಷದ ಪುಟ್ಟ ಮಕ್ಕಳು ಅಜ್ಜ&ಅಜ್ಜಿಯ ಆಶ್ರಯದಲ್ಲಿವೆ. ಮಂಜುನಾಥ (31) ಎಂಬ ವ್ಯಕ್ತಿ ತನ್ನ ಪತ್ನಿ ಪೂಜಾ (29) ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಮಂಜುನಾಥ ಹಾಗೂ ಪೂಜಾ ಇಬ್ಬರೂ ಹಿರಿಯೂರಿ ನವರೇ. ಹಿರಿಯರ ನಿಶ್ಚಯ ಮಾಡಿದಂತೆ 5 ವರ್ಷಗಳ ಹಿಂದೆ ಅವರ ಮದುವೆಯಾಗಿತ್ತು. ಖುಷಿ (4) ಹಾಗೂ ಕುಶಾಲ್ (2) ಎಂಬ ಇಬ್ಬರು ಮಕ್ಕಳೂ ಇದ್ದಾರೆ. ಮಂಜುನಾಥ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಕೆಲವು ದಿನಗಳಿಂದ ಮಂಜುನಾಥ್ಗೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವ ಶಂಕೆ ಕಾಡಲಾರಂಭಿಸಿತ್ತು. ಮನೆ ಬಿಟ್ಟು ಹೋಗಿದ್ದ ಪತ್ನಿಯನ್ನು ಪೊಲೀಸರು ಹುಡುಕಿ ವಾಪಸ್ ಕರೆತಂದ ಮೇಲೂ ಮನೆಗೆ ಬರಲು ನಿರಾಕರಿಸಿದ್ದೂ ಅಷ್ಟೇ ಅಲ್ಲ, ವಿಚ್ಛೇದನವನ್ನೂ ಕೊಡುವುದಿಲ್ಲ ಎಂದು ಹಠ ಹಿಡಿದಿದ್ದಳು. ಈ ಬೆಳವಣಿಗೆಯಿಂದ ರೋಸಿಹೋಗಿದ್ದ ಮಂಜುನಾಥ್ ಪತ್ನಿ ಪೂಜಾಳನ್ನು ಹತ್ಯೆ ಮಾಡಿದ್ದಾನೆ.
ಪೂಜಾ ತನ್ನ ಸಹೋದರ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡ ವಿಷಯ ತಿಳಿದ ನಂತರ ಮಂಜುನಾಥ್, ಪತ್ನಿಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ಹೀಗಾಗಿ 15 ದಿನಗಳ ಹಿಂದೆ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಪೂಜಾ ನಾಪತ್ತೆಯಾಗಿದ್ದಳು. ಈ ಬಗ್ಗೆ ಹೊಸದುರ್ಗ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಪತ್ತೆ ಮಾಡಿ ಪೂಜಾಳನ್ನು ಪೊಲೀಸ್ ಠಾಣೆಗೆ ಕರೆ ತಂದ ನಂತರ ಗಂಡನ ಜೊತೆಯಲ್ಲಿ ಹೋಗಲು ನಿರಾಕರಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಅಲ್ಲದೆ, ಗಂಡ ಮಂಜುನಾಥ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಲು ಮಾಡಿದ ಮನವಿ ನಿರಾಕರಿಸಿ ಅವಮಾನವಾಗುವಂತೆ ವರ್ತಿಸಿದ್ದಳು ಎನ್ನಲಾಗಿದೆ.
ತನ್ನೊಂದಿಗೆ ವಾಸ ಮಾಡಲು ನಿರಾಕರಿಸಿ ಪ್ರತ್ಯೇಕವಾಗಿ ವಾಸವಾಗಿದ್ದ ಪೂಜಾ, ಬುಧವಾರ ಸಂಜೆ ಪಟ್ಟಣದಲ್ಲಿ ತನ್ನ ಸೋದರ ಸಂಬಂಧಿಯೊಂದಿಗೆ ಸುತ್ತಾಡುತ್ತಿರುವುದನ್ನು ಮಂಜುನಾಥ ನೋಡಿದ್ದ. ಇದು ಅವನ ಮನಸ್ಸಿಗೆ ತೀವ್ರ ನೋವನ್ನು ಉಂಟುಮಾಡಿತ್ತು. ಗುರುವಾರ ಬೆಳಗ್ಗೆಯೇ ಮಾತನಾಡುವುದಿದೆ ಬಾ ಎಂದು ಹೇಳಿ ತೋಟದ ಬಳಿಗೆ ಪೂಜಾಳನ್ನು ಕರೆಸಿಕೊಂಡ ಮಂಜುನಾಥ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅವಳನ್ನು ಕೊಲೆ ಮಾಡಿದ್ದಾನೆ. ನಂತರ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಟನೆಯ ಸ್ಥಳಕ್ಕೆ ಎಸ್ಪಿ ಕುಶಲ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ, ಪಿಐ ರಮೇಶಗೌಡ, ಪಿಎಸ್ಐ ಶ್ರೀಶೈಲ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಅಕ್ರಮ ಸಂಬಂಧಕ್ಕೆ ಸಿಲುಕಿದ ತಾಯಿ ತನ್ನ ಪತಿಯಿಂದಲೇ ಕೊಲೆಯಾದರೆ, ಕೊಲೆ ಆರೋಪದ ಮೇಲೆ ತಂದೆ ಜೈಲು ಸೇರಿದ್ದಾನೆ. ಲಾಲನೆ ಪಾಲನೆ ಮಾಡಬೇಕಾಗಿದ್ದ ತಂದೆ ತಾಯಿ ಇಬ್ಬರೂ ಇಲ್ಲದಂತಾಗಿರುವ ಮಕ್ಕಳು ಈಗ ಅಜ್ಜ ಅಜ್ಜಿಯ ಬಳಿ ಆಶ್ರಯ ಪಡೆದಿದ್ದಾರೆ.