ಬಸವರಾಜ್ ಖಂಡೇನಹಳ್ಳಿ ಹಿರಿಯೂರು
ದಕ್ಷಿಣ ಕಾಶಿ ಖ್ಯಾತಿಯ ಹಿರಿಯೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿವೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ತೆರಳುವ ನೂರಾರು ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರದಿಂದಾಗುವ ಟ್ರಾಫಿಕ್ ಕಿರಿಕಿರಿ ಜನರನ್ನು ಹೈರಾಣಾಗಿಸಿದೆ.
ನಗರದ ಹೃದಯ ಭಾಗ ಗಾಂಧಿ ವೃತ್ತದ ಮೂಲಕ ಬೀದರ್-ಶ್ರೀರಂಗಪಟ್ಟಣ ಮತ್ತು ಬೆಂಗಳೂರು ಕಡೆ ತೆರಳುವ ವಾಹನಗಳಿಂದ ಗಂಟೆಗಟ್ಟಲೆ ಸಂಚಾರ ವ್ಯತ್ಯಯವಾಗುತ್ತದೆ. ಇದರಿಂದ ಮಹಿಳೆಯರು ವೃದ್ಧರು, ವಿದ್ಯಾರ್ಥಿಗಳು ಹಾಗೂ ಪಾದಾಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
ಹಿರಿಯೂರು ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಇಲ್ಲಿಗೆ ಪ್ರತಿನಿತ್ಯ ಬರುವ ನೂರಾರು ಸರಕು ಸಾಗಣೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಇದರಿಂದ ಟ್ರಾಫಿಕ್ ಜಾಮ್ ಆಗುತ್ತದೆ ಎಂಬುದು ಸಾರ್ವಜನಿಕರ ದೂರು.
ನಗರ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸುವುದರಿಂದ ಜನರ ಓಡಾಟ, ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಿದೆ. ವಾಹನಗಳ ನಿಯಂತ್ರಣಕ್ಕೆ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು, ಜನರ ಸುರಕ್ಷತೆ, ಅಪಘಾತ ಪ್ರಕರಣ ಭೇದಿಸಲು ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ. ಹೊಸ ಬಡಾವಣೆಗಳ ವಿಸ್ತರಣೆ, ಕೈಗಾರಿಕೆ ಸ್ಥಾಪನೆಯಿಂದ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಭದ್ರತೆ, ಸಂಚಾರ ನಿರ್ವಹಣೆ, ಅಪರಾಧ ನಿಯಂತ್ರಣ, ಕಳ್ಳತನ, ದರೋಡೆ, ವಾಹನ ಕಳವು ತಡೆಗಟ್ಟಲು ನೆರವಾಗುತ್ತದೆ.
ಸಂತೆ ದಿನವಾದ ಶನಿವಾರ, ಹಬ್ಬ, ಉತ್ಸವ, ರಾಜಕೀಯ ಸಭೆ ಆಯೋಜನೆ ಮಾಡಿದಾಗ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಅನುಭವಿಸುವಂತಾಗಿದೆ. ನಗರದಿಂದ ಹೊರ ಹೊಗಲು ಹರಸಾಹಸ ಪಡಬೇಕಿದೆ. ಇದಲ್ಲದೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ನೆಹರು ಮಾರುಕಟ್ಟೆ, ಹುಳಿಯಾರು ರಸ್ತೆ, ಅಂಬೇಡ್ಕರ್ ವೃತ್ತ, ಚಳ್ಳಕೆರೆ ರಸ್ತೆ, ಗಾಂಧಿ ವೃತ್ತ, ಡಾ. ರಾಜ್ಕುಮಾರ್ ಸರ್ಕಲ್, ಚರ್ಚ್ ರಸ್ತೆ, ನಗರ ಸಭೆ ಇತರೆಡೆ ನಿತ್ಯವೂ ಟ್ರಾಪಿಕ್ ಸಮಸ್ಯೆ ಆಗುತ್ತದೆ.
ನಗರದ ಡಾ.ಬಿ.ಆರ್. ಅಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೆ(1ಕಿ.ಮೀ.) ದ್ವಿ-ಪಥ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ವೇದಾವತಿ ಸೇತುವೆಯಿಂದ ಗಾಂಧಿ ವೃತ್ತ, ಹುಳಿಯಾರು ಸಂಪರ್ಕ ರಸ್ತೆ ವಿಸ್ತರಣೆ ನನೆಗುದಿಗೆ ಬಿದ್ದಿರುವುದು ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನಗರದ ಮುಖ್ಯ ರಸ್ತೆಯ ಎರಡೂ ಬದಿಯ ಪುಟ್ಪಾತ್ ಅತಿಕ್ರಮಣದಿಂದ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದ್ದರೂ ನಗರಸಭೆ, ಪೊಲೀಸ್ ಇಲಾಖೆ ಕ್ರಮಕೈಗೊಂಡಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಹಿರಿಯೂರು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿದೆ. ರಸ್ತೆ ಒತ್ತುವರಿ ತೆರವುಗೊಳಿಸುವುದರ ಜತೆ ಜನರ ಸುರಕ್ಷತೆಗೆ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸಬೇಕಿದೆ.ಜಿ.ಪ್ರೇಮ್ಕುಮಾರ್ ನಗರ ಸಭೆ ಮಾಜಿ ಸದಸ್ಯ
ಹಿರಿಯೂರಿನಲ್ಲಿ ಟ್ರಾಫಿಕ್ ಜಾಮ್ ಪ್ರಮುಖ ಸಮಸ್ಯೆಯಾಗಿದೆ. ಶಾಲೆ, ಕಾಲೇಜು, ನಗರದ ಹೃದಯ ಭಾಗದಲ್ಲಿ ತೀವ್ರ ತೊಂದರೆಯಾಗುತ್ತಿದೆ. ವಿಐಪಿ ಮತ್ತು ಜನಪ್ರತಿನಿಧಿಗಳು ಬಂದಾಗ ಮಾತ್ರ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಸ್ತೆಗೆ ಇಳಿಯುತ್ತಾರೆ.ಶಶಿಕಲಾ ರವಿಶಂಕರ್, ಸಮಾಜ ಸೇವಕಿ
ಕಿರಿದಾದ ರಸ್ತೆಗಳು ಏಕಮುಖ ಸಂಚಾರ, ಪುಟ್ಪಾತ್ ಅತಿಕ್ರಮಣ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗಿದೆ.ಕೇಶವಮೂರ್ತಿ, ಬಿಜೆಪಿ ಮುಖಂಡ