ಚಳ್ಳಕೆರೆಯಲ್ಲಿ ತೆರವುಗೊಳಿಸಿದ ಮಳಿಗೆಗಳ ಜಾಗದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ನಗರಸಭೆ ಸಿದ್ಧಪಡಿಸಿರುವ ನೀಲಿನಕ್ಷೆ. Blue Print
ಚಿತ್ರದುರ್ಗ

ಚಳ್ಳಕೆರೆ ನಗರಸಭೆಯ ವಾಣಿಜ್ಯ ಸಂಕೀರ್ಣ ನಿರ್ಮಾಣ ಯಾವಾಗ?

ನೂತನ ಕಟ್ಟಡದ ಭರವಸೆ ನೀಡಿ ಹಳೆಯ 98 ಮಳಿಗೆ ನೆಲಸಮ, ಸಂದಿಗ್ದತೆಯಲ್ಲಿ ವ್ಯಾಪಾರಸ್ಥರು

ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ

ನಗರಸಭೆಗೆ ಒಳಪಟ್ಟ ಸುಮಾರು 98 ಮಳಿಗೆಗಳನ್ನು ಶಿಥಿಲಗೊಂಡಿವೆ ಎನ್ನುವ ಕಾರಣ ನೀಡಿ ವ್ಯಾಪಾರಸ್ಥರನ್ನು ಖಾಲಿ ಮಾಡಿಸಿ ನೆಲಸಮಗೊಳಿಸಿದ್ದ ಜಾಗದಲ್ಲಿ 7 ತಿಂಗಳು ಕಳೆದರೂ ಹೊಸ ಮಳಿಗೆ ನಿರ್ಮಾಣ ಯೋಜನೆ ಇನ್ನೂ ಆರಂಭವಾಗಿಲ್ಲ. ಇದರಿಂದ ಮಳಿಗೆಗಳಲ್ಲಿ ಅಂಗಡಿ ಇನಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದ ನೂರಾರು ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳೆಯ ಮಳಿಗೆಗಳು ಶಿಥಿಲಗೊಂಡಿದ್ದು ಬಿದ್ದು ಅನಾಹುತವಾಗಬಹುದು. ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಿಸಿ ಅದರಲ್ಲಿ ನಿಮಗೆ ಮೊದಲ ಪ್ರಾಶಸ್ತ್ಯ ಕೊಡುತ್ತೇವೆ ಎಂದು ಹೇಳಿ ಮಾರ್ಚ್ ತಿಂಗಳಲ್ಲಿ ನಗರದ ಸಂತೆ ಮಾರುಕಟ್ಟೆ, ಮಹದೇವಿ ರಸ್ತೆಯಲ್ಲಿದ್ದ 98 ಮಳಿಗೆಗಳನ್ನು ಕೆಡವಲಾಗಿತ್ತು. ಆದರೆ, ಅರ್ಧ ವರ್ಷವಾದರೂ ಕಟ್ಟಡ ಕಟ್ಟುವ ಲಕ್ಷಣಗಳೇ ಕಾಣುತ್ತಿಲ್ಲ ಎಂದು ವ್ಯಾಪಾರಸ್ಥರು ಅಲವತ್ತುಕೊಳ್ಳುತ್ತಿದ್ದಾರೆ.

ಶಾಸಕರ ಮಾತು ಧಿಕ್ಕರಿಸಿದ್ದ ವ್ಯಾಪಾರಸ್ಥರು?

2 ವರ್ಷಗಳ ಹಿಂದೆ ಶಾಸಕ ಟಿ. ರಘು ಮೂರ್ತಿ ಅವರನ್ನು ಭೇಟಿ ಮಾಡಿದ್ದ ಮಳಿಗೆಗಳ ಬಾಡಿಗೆದಾರರು, ನಾವು 50 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಮಳಿಗೆಗಳು ಶಿಥಿಲವಾಗಿರುವ ಕಾರಣ ಹೇಳಿ ನಮ್ಮನ್ನು ಹೊರಹಾಕಲು ಯತ್ನಿಸುತ್ತಿದ್ದಾರೆ. ಮಳಿಗೆಗಳ ದುರಸ್ತಿಗೆ ಸಾಕಷ್ಟು ಬಂಡವಾಳ ಹಾಕಿದ್ದೇವೆ. ಹಾಗಾಗಿ, ನಮಗೆ ಮುಂದುವರೆಯಲು ಕಾಲಾವಕಾಶ ಕೊಡಿ ಎಂದು ಕೇಳಿಕೊಡಿದ್ದರು. ಕಟ್ಟಡ ಹಳೆಯದಾಗಿರುವುದರಿಂದ ರಿಸ್ಕ್ ತೆಗೆದುಕೊಳ್ಳಬೇಡಿ. ಕಟ್ಟಡ ಕೆಡವಲು ಸಹಕರಿಸಿ. ನೂತನ ಮಳಿಗೆಗಳಲ್ಲಿ ನಿಮಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ಶಾಸಕ ಟಿ. ರಘುಮೂರ್ತಿ ಮನವರಿಕೆ ಮಾಡಿದರೂ ಕೇಳದ ವ್ಯಾಪಾರಸ್ಥರು ಕೋರ್ಟ್ ಮೊರೆ ಹೋಗಿದ್ದರು. ಸಾಧಕ ಬಾಧಕ ಆಲಿಸಿದ ಕೋರ್ಟ್ ಕಟ್ಟಡ ಹಳೆಯದಾಗಿರುವುದರಿಂದ ನೆಲಸಮ ಮಾಡುವ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ಕಟ್ಟಡ ನೆಲಸಮಗೊಳಿಸಿತ್ತು.

ಬಾಡಿಗೆಗೆ 600 ಅರ್ಜಿ

ನಗರದಲ್ಲಿ ನಿರ್ಮಾಣವಾಗಲಿರುವ ವಾಣಿಜ್ಯ ಮಳಿಗೆಗಳಿಗೆ ಬೇಡಿಕೆ ಎಷ್ಟಿದೆ ಎಂದು ತಿಳಿಯಲು ಅರ್ಜಿ ಆಹ್ವಾನಿಸಿದ್ದ ನಗರಸಭೆಗೆ 600 ಜನರು ಅರ್ಜಿ ಸಲ್ಲಿಸಿ ಮಳಿಗೆಗಳ ಹಂಚಿಕೆಗೆ ಕಾಯುತ್ತಿದ್ದಾರೆ. ಅರ್ಜಿ ಸಲ್ಲಿಸುವಾಗ ಕೆಲವೇ ದಿನಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದ ಅಧಿಕಾರಿಗಳು, ಈಗ ಮೌನವಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ನೂತನ ಮಳಿಗೆಗಳ ವಿನ್ಯಾಸ

ಸಂತೆ ಮೈದಾನದ ಬೆಂಗಳೂರು ರಸ್ತೆಯಲ್ಲಿ ಎರಡು ಅಂತಸ್ತಿನ ಕಟ್ಟಡದಲ್ಲಿ 123 ಮಳಿಗೆ ನಿರ್ಮಿಸುವ ಯೋಜನೆ ಇದೆ. ಇದರಲ್ಲಿ ಹೋಟೆಲ್, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ ಮಳಿಗೆಗಳು ಇರಲಿವೆ. ಮಹದೇವಿ ರಸ್ತೆ ಮಾರ್ಗದಲ್ಲಿ 62 ಕೊಠಡಿಗಳು ಸೇರಿ ಒಟ್ಟು 185 ಮಳಿಗೆಗಳು ನಿರ್ಮಾಣ ಆಗಲಿವೆ ಎಂದು ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ತಿಳಿಸಿದ್ದಾರೆ

ನೆಲಸಮಗೊಳಿಸುವ ಅಗತ್ಯವಿತ್ತೇ?

ಕೆಡವಿದ ಕೆಲವೇ ತಿಂಗಳಲ್ಲಿ ನೂತನ ಮಳಿಗೆಗಳನ್ನು ನಿರ್ಮಿಸಿ ಹರಾಜು ಮೂಲಕ ವ್ಯಾಪಾರಸ್ಥರಿಗೆ ಹಂಚಿಕೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಮಳಿಗೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನೂತನ ಮಳಿಗೆ ನಿರ್ಮಾಣಕ್ಕೆ ಅನುದಾನವೇ ಇಲ್ಲ ಎನ್ನಲಾಗಿದೆ. ಅನುದಾನವಿಲ್ಲದ ಮೇಲೆ ಮಳಿಗೆ ನೆಲಸಮಗೊಳಿಸುವ ಅಗತ್ಯ ಏನಿತ್ತು ? ಎಂದು ಹಳೇ ಮಳಿಗೆಗಳ ವ್ಯಾಪಾರಸ್ಥರು ಮತ್ತು ನೂತನ ಮಳಿಗೆಗೆ ಅರ್ಜಿ ಸಲ್ಲಿಸಿರುವ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ 185 ಮಳಿಗೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಈಗಾಗಲೇ, ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ 36 ಕೋಟಿ ರೂ. ಒಪ್ಪಿಗೆ ಸಿಕ್ಕಿದೆ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ಆಗಬೇಕು. ಚುನಾವಣೆ ನೀತಿಸಂಹಿತೆಯಿಂದ ತಡವಾಗಿದೆ. ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿ ಆರಂಭಿಸುತ್ತೇವೆ.
ಡಾ. ನಾಗವೇಣಿ ಪೌರಾಯುಕ್ತೆ, ನಗರಸಭೆ, ಚಳ್ಳಕೆರೆ