ಹೊಳಲ್ಕೆರೆ: ಮುಂದಿನ ಒಂದೆರಡು ತಿಂಗಳಿನಲ್ಲಿ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಶಾಸಕ ಡಾ.ಎಂ. ಚಂದ್ರಪ್ಪ ಭರವಸೆ ನೀಡಿದರು.
ತಾಳ್ಯ&ಮದ್ದೇರು ಗ್ರಾಮಗಳ ಮಧ್ಯದಲ್ಲಿ 21 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ 66/11 ಕೆ.ವಿ. ವಿದ್ಯುತ್ ಉಪ ಕೇಂದ್ರದ ಕಾಮಗಾರಿಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರೈತರು ತೋಟ ಉಳಿಸಿಕೊಳ್ಳಲಾಗದ ಪರಿಸ್ಥಿತಿ ತಲುಪಿದ್ದಾಗ ಭದ್ರಾ ಪ್ರಾಜೆಕ್ಟ್ನಿಂದ ಟ್ರಯಲ್ ರನ್ ಆದ ಮೇಲೆ ಹೊಳಲ್ಕೆರೆಗೆ ನೀರು ಹರಿಯಿತು. ಚಿಕ್ಕಮಗಳೂರಿನ ಹಗರಿ ಗ್ರಾಮದಲ್ಲಿ ರೈತರು ಕೇಸ್ ಹಾಕಿದ ಪರಿಣಾಮ ರೈತರೊಂದಿಗೆ ಅಲ್ಲಿಗೆ ಹೋಗಿ ವಿಚಾರಿಸಿ 3 ತಿಂಗಳಲ್ಲಿ ಕೇಸ್ ಕ್ಲಿಯರ್ ಆಗುವಂತೆ ನೋಡಿಕೊಂಡೆ ಎಂದು ತಿಳಿಸಿದರು. ಮಲಸಿಂಗನಹಳ್ಳಿ ಗುಡ್ಡದ ಹತ್ತಿರವಿರುವ ಕೆರೆಗೆ ನೀರು ಹರಿಸಲಾಗುತ್ತದೆ. ಗೂಳಿಹೊಸಹಳ್ಳಿ ಬಳಿ ಎಪ್ಪತ್ತು ಎಚ್.ಪಿ.ಮೋಟಾರ್ ಕೂರಿಸಿ ಕೆರೆಯಾಗಳಹಳ್ಳಿ ಕೆರೆಗೆ ನೀರು ತುಂಬಿಸಲಾಗುವುದು. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ. ಖರ್ಚು ಮಾಡಲಾಗಿದೆ. ಗುಂಡೇರಿ, ತಾಳ್ಯ, ಟಿ. ಎಮ್ಮಿಗನೂರು, ಹನುಮಲಿ, ತುಪ್ಪದಹಳ್ಳಿ, ಹಿರೆಕಂದವಾಡಿ, ಹಿರೇಎಮ್ಮಿಗನೂರು ಗ್ರಾಮಗಳಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಲಾಗುವುದು. ಈಗಾಗಲೇ ಚಿತ್ರಹಳ್ಳಿ, ಮಲ್ಲಾಡಿಹಳ್ಳಿಯಲ್ಲಿ ನಿರ್ಮಾಣವಾಗಿದೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 13.5 ಎಕರೆ ಪ್ರದೇಶದಲ್ಲಿ 500 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಆಗುತ್ತಿದೆ. ಜೋಗಫಾಲ್ಸ್ ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಸ್.ಮಂಜಣ್ಣ, ಮುಖ್ಯ ಅಭಿಯಂತರರಾದ ರೇವಣಸಿದ್ದಪ್ಪ, ಹರೀಶ್ಕುಮಾರ್, ಲಿಂಗರಾಜ್, ರಮೇಶ್, ಬಿಜೆಪಿ ಮುಖಂಡರಾದ ಚಿತ್ರಹಳ್ಳಿ ದೇವರಾಜ್, ದಾಸಯ್ಯನಹಟ್ಟಿ ರಮೇಶ್, ನಿತಿನ್, ಪುಟ್ಟಣ್ಣ, ತಮ್ಮಣ್ಣ, ರಾಜಣ್ಣ, ತಿಪ್ಪೇಶ್, ಬಸವರಾಜ್, ಮಂಜು, ಸ್ವಾಮಿ, ರವಿ, ಕಲ್ಲಜ್ಜ, ಗುತ್ತಿಗೆದಾರ ನಾಗಭೂಷಣ್ ಇದ್ದರು.