ಹೊಸದುರ್ಗ: ಪಟ್ಟಣ ಸೇರಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಭದ್ರಾ ಜಲಾಶಯದಿಂದ 2027ರ ಫೆಬ್ರವರಿ ವೇಳೆಗೆ ನೀರು ಒದಗಿಸಲಾಗುವುದು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ತಾಲೂಕಿನ ಅನಿವಾಳ ಗ್ರಾಮದಲ್ಲಿ ಭಾನುವಾರ ಭದ್ರಾ ನೀರಿನಿಂದ ತುಂಬಿದ್ದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ರಾಯೋಗಿಕವಾಗಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಕೆರೆಗಳನ್ನು ತುಂಬಿಸಲು 3 ಟಿಎಂಸಿ ನೀರು ಹರಿಸಲಾಗಿದೆ. ಇನ್ನೂ ಕೆಲವು ಕೆರೆಗಳಿಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಹರಿಸಲು ಸರ್ಕಾರ ತೀರ್ಮಾನಿಸಿದೆ. ಭದ್ರಾ ನದಿಯಿಂದ ರೈತರ ಜಮೀನುಗಳಿಗೆ ಹಾಗೂ ಕುಡಿಯಲು ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನ ಕೊಂಡಜ್ಜಿ ಗ್ರಾಮ ಬಳಿ ನೂರು ಎಕರೆ ಪ್ರದೇಶದಲ್ಲಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸಂಗ್ರಹ ಕೇಂದ್ರ ಸ್ಥಾಪಿಸಲಾಗುವುದು. ಯೋಜನೆಗೆ ಅಗತ್ಯ ಭೂಮಿ ಮಂಜೂರಾತಿ ಮಾಡಲಾಗಿದೆ. ವಿದ್ಯುತ್ ಸಂಗ್ರಹ ಕೇಂದ್ರ ಸ್ಥಾಪನೆಯಿಂದ ನಾಲ್ಕು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜಾಗಲಿದೆ. ಶೀಘ್ರದಲ್ಲೇ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತಾಲೂಕಿಗೆ ಕರೆತಂದು ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಜವಳಿ ಆಯುಕ್ತ ಪಿ.ಕೆ. ಪರಪ್ಪ ಮಾತನಾಡಿ, ಶಾಸಕ ಬಿ.ಜಿ. ಗೋವಿಂದಪ್ಪ ಅವರ ಸತತ ಪರಿಶ್ರಮ ಹಾಗೂ ರಾಜಕೀಯ ಇಚ್ಛಾಶಕ್ತಿ ಫಲವಾಗಿ ತಾಲೂಕಿಗೆ ಭದ್ರಾ ನೀರು ಹರಿದು ಬಂದಿದೆ. ಭದ್ರಾ ಜಲಾಶಯದಿಂದ ತಾಲೂಕಿನ ಜನರಿಗೆ ಕುಡಿಯುವ ನೀರು ತರಲಾಗುತ್ತಿದ್ದು, ಮುಂದಿನ 50 ವರ್ಷಗಳ ನೀರಿನ ಬೇಡಿಕೆಗೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ, ವಕೀಲ ಎ.ಎಲ್. ಬೊಮ್ಮಣ್ಣ, ಕರಿಸಿದ್ದಯ್ಯ, ಓಂಕಾರಮೂರ್ತಿ, ಗಿರೀಶ, ಚಂದ್ರಶೇಖರ, ಮಂಜುನಾಥ ಇತರರಿದ್ದರು.