ಹೊಳಲ್ಕೆರೆ ತಾಲೂಕಿನ ಬೊಮ್ಮನಹಳ್ಳಿ ಸಮೀಪದ ಭದ್ರಾ ಕಾಲುವೆ ಬಳಿ, ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, ತಾಲೂಕು ಸಂಘದ ಪದಾಧಿಕಾರಿಗಳು ಹಾಗೂ ರೈತರು ಜೂನ್ 8 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಕರಪತ್ರಗಳನ್ನು ಬಿಡುಗಡೆ ಮಾಡಿದರು.
- ರೈತ ಮುಖಂಡ ಈಚಘಟ್ಟದ ಸಿದ್ಧವೀರಪ್ಪ ಹೇಳಿಕೆ
- ಬೊಮ್ಮನಹಳ್ಳಿ ಭದ್ರಾ ಕಾಳುವೆ ಬಳಿ 6ನೇ ದಿನಕ್ಕೆ ಕಾಲಿಟ್ಟ ಅನಿರ್ಧಿಷ್ಟಾವಧಿ ಧರಣಿ
ಚಿಕ್ಕಜಾಜೂರು: ಹೊಳಲ್ಕೆರೆ ತಾಲೂಕಿಗೆ ಸಮಗ್ರ ನೀರಾವರಿಗೆ ಒತ್ತಾಯಿಸಿ ಜೂನ್ 8 ರಂದು ತಾಲ್ಲೂಕಿನ ಎಲ್ಲ ರೈತರೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ ಸಮೀಪದ ಹಾದು ಹೋಗಿರುವ ಭದ್ರಾ ಕಾಲುವೆ ಬಳಿ ತಾಲೂಕಿನ ರೈತ ಸಂಘದ ಮುಖಂಡರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರದ ಆರನೇ ದಿನ ಬುಧವಾರ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಸಮಗ್ರ ನೀರಾವರಿಯಿಂದ ಹೊಳಲ್ಕೆರೆ ತಾಲೂಕಿಗೆ ಅನ್ಯಾಯವಾಗಿದೆ. ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ, ಕೆರೆಗಳಿಗೆ ನೀರು ತುಂಬಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಕೆರೆಗೆ ನೀರು ತುಂಬಿಸಿದರೆ, ಅಚ್ಚುಕಟ್ಟು ಪ್ರದೇಶದ ರೈತರಿಗಷ್ಟೇ ಅನುಕೂಲವಾಗುತ್ತದೆ. ಆದರೆ, ಕೆರೆ ಇಲ್ಲದ ಊರುಗಳ ರೈತರು ಇಂತಹ ನೀರಾವರಿ ಯೋಜನೆಯಿಂದ ವಂಚಿತರಾಗುತ್ತಾರೆ. ಕೆರೆಗಳಿಲ್ಲದ ಹಳ್ಳಿಗಳ ಜಮೀನುಗಳಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಆಗ ಮಾತ್ರ ಯೋಜನೆಯ ಲಾಭ ದೊರೆಯಲಿದೆ ಎಂದರು.
ಆರು ಟಿಎಂಸಿ ಅಡಿ ನೀರಿಗೆ ಆಗ್ರಹ: ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಕನಿಷ್ಠ 6 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಆದರೆ, ಅಧಿಕಾರಿಗಳು ಹೇಳುತ್ತಿರುವುದೇ ಬೇರೆ. ತಾಲೂಕಿಗೆ 5.1 ಟಿಎಂಸಿ ಅಡಿ ನೀರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಎಂಜಿನಿಯರ್‌ಗಳು ಹೇಳುತ್ತಾರೆ. ಇದು ನಾವು ಪ್ರತಿಭಟನೆ ನಿಲ್ಲಿಸಲು ಮತ್ತು ರೈತರ ಕಣ್ಣೊರೆಸುವ ತಂತ್ರಗಾರಿಕೆ ಆಗಿದೆ. ಆದರೆ, ಅಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡುವುದರ ಜತೆ, ಅದೇಶ ಹೊರಡಿಸಿದರೆ ಮಾತ್ರ ರೈತರ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಎಂದು ಸಿದ್ಧವೀರಪ್ಪ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ 11 ತಾಲೂಕುಗಳಿಗೆ ಸಾಕಷ್ಟು ನೀರು ಹಂಚಿಕೆ ಮಾಡಲಾಗಿದೆ. ಆದರೆ, ಹೊಳಲ್ಕೆರೆಗೆ ಮಾತ್ರ ಸರಿಯಾದ ಪ್ರಮಾಣ ನೀಡಿಲ್ಲ. ಎಲ್ಲ ತಾಲೂಕುಗಳಂತೆ ಸರ್ಕಾರ ನಮಗೂ ಸರಿಯಾದ ನೀರಿನ ಪ್ರಮಾಣ ನಿಗದಿಪಡಿಸಿ ಆದೇಶ ಹೊರಡಿಸಲಿ.
ಹೊಳಲ್ಕೆರೆ ತಾಲೂಕಿನಲ್ಲಿ ಅಡಿಕೆ, ತೆಂಗು, ಬಾಳೆ ಮತ್ತಿತರ ತೋಟಗಾರಿಕಾ ಬೆಳೆಗಳನ್ನು ನಂಬಿಕೊಂಡು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅದರೆ, ಸಮರ್ಪಕ ನೀರಿಲ್ಲದೆ, ರೈತರು ಕೊಳವೆ ಬಾವಿಗಳ ಮೊರೆ ಹೋಗಿ ತೋಟ, ಜಮೀನುಗಳನ್ನು ಬ್ಯಾಂಕ್ ಮತ್ತು ಖಾಸಗಿಯವರಿಗೆ ಅಡಮಾನ ಮಾಡಿ, ಸಾಲಗಾರರಾಗುವುದರ ಜತೆ, ತೋಟಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅದ್ದರಿಂದ, ತಾಲೂಕಿನ ಪ್ರತಿಯೊಬ್ಬ ರೈತರ ಜಮೀನುಗಳಿಗೆ ನ್ಯಾಯ ಸಿಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಸಿದ್ಧವೀರಪ್ಪ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ರಂಗಸ್ವಾಮಿ, ದಾನೇಶ್, ತಾಳಿಕಟ್ಟೆ ನಾಗಪ್ಪ, ಸದಾಶಿವಪ್ಪ, ರಾಜಪ್ಪ, ಅನ್ನಪೂರ್ಣಮ್ಮ, ಇಂದೂಧರ, ನಿಜಲಿಂಗಪ್ಪ, ಮುರುಗೇಶ್, ರುದ್ರೇಶ್, ಗಂಗಸಮುದ್ರ, ಬೊಮ್ಮನಹಳ್ಳಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತ ಮುಖಂಡರು ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.