ಚೆಕ್‌ಡ್ಯಾಂಗಳಿಗೆ ರಾಣೀಕೆರೆ ನೀರು ಹರಿಸುವ ಸಂಬಂಧ ಶುಕ್ರವಾರ ಶಾಸಕ ಟಿ. ರಘುಮೂರ್ತಿ ಸಮ್ಮುಖದಲ್ಲಿ ಸಭೆ ನಡೆಯಿತು. ಕೆ.ಜೆ. ಕಾಂತರಾಜ್, ರೇಹಾನ್ ಪಾಷಾ, ಕೆ. ಕುಮಾರ್ ಇದ್ದರು. Sabha 
ಚಿತ್ರದುರ್ಗ

ಚೆಕ್‌ಡ್ಯಾಂಗಳಿಗೆ ರಾಣೀಕೆರೆ ನೀರು ಹರಿಸಲು ಮಂಗಳವಾರದ ಮುಹೂರ್ತ sabha

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಅಧ್ಯಕ್ಷತೆಯಲ್ಲಿ ಜರುಗಿದ ಸಂಧಾನ ಸಭೆ
  • ಎರಡು ಗ್ರಾಮಗಳ ರೈತರ ವಿವಾದ ಇತ್ಯರ್ಥ
ಚಳ್ಳಕೆರೆ: ತಾಲೂಕಿನ ಮೀರಾಸಾಬಿಹಳ್ಳಿಯ ರಾಣೀಕೆರೆ ನೀರನ್ನು ಸಮೀಪದ ಗರಣಿ ಹಳ್ಳಕ್ಕೆ ನಿರ್ಮಿಸಿರುವ ಚೆಕ್‌ಡ್ಯಾಂಗಳಿಗೆ ಹರಿಸುವ ಸಂಬಂಧ ಅಚ್ಚುಕಟ್ಟು ಪ್ರದೇಶದ ಹಳ್ಳಿಗಳು ಹಾಗೂ ಕೆರೆ ಮೇಲ್ಬಾಗದ ಗ್ರಾಮಗಳ ನಡುವೆ ಏರ್ಪಟ್ಟಿದ್ದ ಜಗಳ ಶಾಸಕ ಟಿ. ರಘುಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ಜರುಗಿದ ಸಂಧಾನ ಸಭೆಯಲ್ಲಿ ಬಗೆಹರಿದಿದೆ. Sabha
ಅಚ್ಚುಕಟ್ಟು ಗ್ರಾಮಗಳ ಬೇಡಿಕೆಯಂತೆ ನೀರು ಹರಿಸುವ ತೀರ್ಮಾನವಾಗಿದ್ದು, ಕೆರೆಯ ತೂಬಿನ ಸಾಮರ್ಥ್ಯ ಪರಿಶೀಲನೆ ನಂತರ ಜು.6 ಇಲ್ಲವೇ 7 ರಂದು ಶಾಸಕ ರಘುಮೂರ್ತಿ ಸಮ್ಮುಖದಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ.
ರಾಣೀಕೆರೆಯಲ್ಲಿರುವ ಸುಮಾರು 15 ಅಡಿಯಷ್ಟು ನೀರಿನ ಪೈಕಿ ಜಾನುವಾರು, ಪ್ರಾಣಿ, ಪಕ್ಷಿಗಳ ಅನುಕೂಲಕ್ಕೆ 1 ಅಡಿಯಷ್ಟು ನೀರನ್ನು ಗರಣಿಹಳ್ಳದ ಚೆಕ್‌ಡ್ಯಾಂಗಳಿಗೆ ಹರಿಸಲು ಜೂ.22 ರಂದು ಜಿಲ್ಲಾಡಳಿತ ಆದೇಶಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆರೆ ಮೇಲ್ಭಾಗದ ಬೊಮ್ಮಸಮುದ್ರ, ಭರಮಸಾಗರ ಗ್ರಾಮಸ್ಥರು 2001ರಿಂದ ಇದುವರೆಗೂ ಕೆರೆಯ ನೀರನ್ನು ಹೊರಗೆ ಹರಿಸಿಲ್ಲ. ಕೆರೆಯಲ್ಲಿ ನೀರರಿದ್ದರೆ ಕೊಳವೆಬಾವಿಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ಮಳೆಯ ಕೊರತೆ ಇದೆ. ಅಲ್ಲದೆ, ಕೆರೆ ತೂಬುಗಳು ಅತಂತ್ರ ಸ್ಥಿತಿಯಲ್ಲಿವೆ. ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಉಪ ವಿಭಾಗಾಧಿಕಾರಿ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ್ದ ಸಭೆಯಲ್ಲಿ ಪಟ್ಟು ಹಿಡಿದಿದ್ದರು.
ಕೆರೆಯ ಅಚ್ಚುಕಟ್ಟು ಪ್ರದೇಶದ ಮೀರಾಸಾಬಿಹಳ್ಳಿ, ಕರೀಕೆರೆ, ವಿಡುಪನಕುಂಟೆ, ರಂಗವ್ವನಹಳ್ಳಿ, ವಿಶ್ವೇಶ್ವಪುರ ಮತ್ತು ಕೆರೆ ಮೇಲ್ಭಾಗದ ಗ್ರಾಮಗಳಾದ ಬೊಮ್ಮಸಮುದ್ರ, ಭರಮಸಾಗರ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿದ ಶಾಸಕ ಟಿ. ರಘುಮೂರ್ತಿ, ನೀರು ಹರಿಸಲು ಯಾಕೆ ವಿರೋಧ ಮಾಡುತ್ತಿರುವುದು ಎಂದು ನೇರವಾಗಿ ಪ್ರಶ್ನೆ ಮಾಡಿದರು.
ಕೆರೆಯಲ್ಲಿ 15 ಅಡಿ ನೀರಿದೆ ಎನ್ನುವುದು ಸುಳ್ಳು. ಎಂಟು ಅಡಿಯಷ್ಟು ಹೂಳು ತುಂಬಿಕೊಂಡಿದೆ. ಮೇಲಾಗಿ, ಕೆರೆಯ ತೂಬುಗಳಿಗೆ ಅಳವಡಿಸಿರುವ ಮರದ ದಿಮ್ಮಿಗಳು ಅತಂತ್ರ ಸ್ಥಿತಿಯಲ್ಲಿವೆ. ಒಂದು ವೇಳೆ ತೂಬು ಎತ್ತಿದಾಗ ನಿಯಂತ್ರಣ ಕಳೆದುಕೊಂಡಲ್ಲಿ ಮತ್ತೆ ನೀರು ನಿಲ್ಲಿಸುವುದು ಕಷ್ಟವಾಗುತ್ತದೆ. ಮಳೆ ಇಲ್ಲ. ಕೊಳವೆಬಾವಿಗಳ ಅಂತರ್ಜಲ ವೃದ್ಧಿಗೆ, ಜಾನುವಾರುಗಳಿಗೆ ಕುಡಿಯಲು ಕೆರೆಯ ನೀರು ಆಸರೆಯಾಗಿದೆ ಎಂದು ಕೆರೆ ಮೇಲ್ಬಾಗದ ಗ್ರಾಮಸ್ಥರಾದ ಒಂಕಾರಪ್ಪ, ಪ್ರಭು, ಬೊಮ್ಮಣ್ಣ, ಅಶೋಕ್ ಇತರರು ಪ್ರತಿಕ್ರಿಯಿಸಿದರು.
ಕೆರೆಯ ತೂಬಿನ ಬಗ್ಗೆ ಆತಂಕ ಬೇಡ. ತಂತ್ರಜ್ಞರನ್ನು ಕರೆಸಿ ಪರಿಶೀಲನೆ ಮಾಡಿಸಿ ಮರಳಿನ ಚೀಲಗಳ ಭದ್ರತೆ ಮಾಡಿಕೊಂಡ ಬಳಿಕವೇ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಶಾಸಕರ ಮಾತಿಗೆ ಕೆರೆ ಮೇಲ್ಬಾಗದ ಗ್ರಾಮಸ್ಥರು ಸಮ್ಮತಿ ಸೂಚಿಸಿದರು. ಕೆರೆಯ ತೂಬು ಪರಿಶೀಲನೆ ಮಾಡಿಕೊಂಡು ಜು.6 ಇಲ್ಲವೇ 7ರಂದು ನೀರು ಹರಿಸಲು ಸಭೆಯಲ್ಲಿ ನಿರ್ಣಯವಾಗಿದೆ.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್, ತಹಸೀಲ್ದಾರ್ ರೇಹಾನ್ ಪಾಷಾ, ಪಿಐ ಕೆ. ಕುಮಾರ್, ಸಣ್ಣ ನೀರಾವರಿ ಇಲಾಖೆ ಇಇ ಕೃಷ್ಣಮೂರ್ತಿ ಇತರರು ಇದ್ದರು.