ಹೊಸದುರ್ಗ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿದರು. ತಹಸೀಲ್ದಾರ್ ತಿರುಪತಿ ವಿ. ಪಾಟೀಲ್, ತಾಪಂ ವ್ಯವಸ್ಥಾಪಕ ಕರಿಯಪ್ಪ ಇತರರಿದ್ದರು. meeting 
ಚಿತ್ರದುರ್ಗ

ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ meeting

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಪಿಡಿಒಗಳಿಗೆ ಶಾಸಕ ಬಿ.ಜಿ. ಗೋವಿಂದಪ್ಪ ಸಲಹೆ
  • ಗ್ರಾಪಂಗಳ ಪ್ರಗತಿ ಪರಿಶೀಲನೆ
ಹೊಸದುರ್ಗ: ಗ್ರಾಪಂ ಆಡಳಿತಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು. meeting
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೇವಲ ಕಡತಗಳು, ಚೆಕ್‌ಗಳಿಗೆ ಸಹಿ ಮಾಡಲು ಸೀಮಿತವಾಗದೆ ಹಳ್ಳಿಗಳಿಗೆ ತೆರಳಿ ಜನರಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.
ಗ್ರಾಪಂಗಳಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದ ಕಾರಣ ಅಧಿಕಾರಿಗಳು ಜನರ ಸಮಸ್ಯೆಗಳ ಕುರಿತು ಹೆಚ್ಚಿನ ಗಮನಕೊಡಬೇಕು. ಜನರು ಸಮಸ್ಯೆ ಹೇಳುವ ಮೊದಲೇ ಗ್ರಾಮಗಳಿಗೆ ತೆರಳಿ ಸಮಸ್ಯೆಗಳನ್ನು ಗುರುತಿಸಿ ಪರಿಹಾರಕ್ಕೆ ಮುಂದಾಗಬೇಕು. ಜನರನ್ನು ಪದೇ ಪದೆ ಕಚೇರಿಗೆ ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.
ಪ್ರತಿ ತಿಂಗಳ ಮೊದಲನೆ ಹಾಗೂ ಮೂರನೇ ಶನಿವಾರ ಗ್ರಾಪಂ ಕಚೇರಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ಚಿಂತನೆಯಿದೆ. ಬೀದಿ ದೀಪಗಳ ನಿರ್ವಹಣೆ , ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಪಿಡಿಒಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.
ಕುಡಿಯುವ ನೀರು, ಬೀದಿ ದೀಪಗಳ ಕುರಿತು ಹೆಚ್ಚು ದೂರುಗಳು ಬರುತ್ತಿವೆ. ಸಬೂಬುಗಳನ್ನು ಹೇಳದೆ ಕೆಲಸ ಮಾಡಬೇಕು. ಹೈಮಾಸ್ ದೀಪಗಳನ್ನು ಅಳವಡಿಸುವ ಕಡೆಗಳಲ್ಲಿ ಅನಗತ್ಯ ಬೀದಿ ದೀಪ ಉರಿದು ವಿದ್ಯುತ್ ದುರ್ಬಳಕೆಯಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಖಾಸಗಿ ಏಜೆನ್ಸಿಗಳ ನಿರ್ವಹಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಪಂ ಸುಪರ್ದಿಗೆ ಪಡೆದು ನಿರ್ವಹಣೆ ಮಾಡಬೇಕು. ನೀರಿನ ಕುರಿತು ದೂರುಗಳು ಬಂದರೆ ಸುಮ್ಮನಿರುವುದಿಲ್ಲ. ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸಮಸ್ಯೆಗಳಿರುವ ಕಡೆ ಹೋಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಇದನ್ನು ಕ್ಷಮಿಸುವುದಿಲ್ಲ ಎಂದರು.
ತಂತ್ರಾಂಶ ಸರಿಪಡಿಸಲು ಮನವಿ: ಹೊಸ ಕಂದಾಯ ಗ್ರಾಮಗಳು ಗ್ರಾಪಂ ತಂತ್ರಾಂಶದಲ್ಲಿ ಸಿಗುತ್ತಿಲ್ಲ. ಹೀಗಾಗಿ ಆಸ್ತಿಗಳಿಗೆ ಈ ಸ್ವತ್ತು ನೀಡಲು, ಕಂದಾಯ ನಿರ್ವಹಣೆಗೆ ಸಮಸ್ಯೆಯಾಗಿದೆ. ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಇ ಸ್ವತ್ತು ನೀಡಲು ಆಸ್ತಿಯ ನೋಂದಣಿ ದಾಖಲೆ ಹಾಗೂ ಇಸಿ ಮಾಹಿತಿಯನ್ನು ದಾಖಲಿಸಬೇಕಾಗಿದೆ. ಆದರೆ, ತಾಂತ್ರಿಕ ಕಾರಣದಿಂದ ಇ ಸ್ವತ್ತು ಒದಗಿಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯವಾಗಿ ತುಂಬಾ ಸಮಸ್ಯೆಯಾಗಿದೆ. ಸರ್ಕಾರದ ಮಟ್ಟದಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಪಿಡಿಒಗಳು ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಮನವಿ ಮಾಡಿದರು.
ಹಣ ಬಿಡುಗಡೆಗೆ ಮನವಿ: ದೇವಪುರ ಗ್ರಾಪಂ ಪಿಡಿಒ ನಯಾಜ್ ಮಾತನಾಡಿ, 15ನೇ ಹಣಕಾಸು ನಿಧಿಯನ್ನು ಸರ್ಕಾರ ಇಲ್ಲಿಯವರೆಗೆ ಗ್ರಾಪಂಗೆ ಬಿಡುಗಡೆ ಮಾಡದಿರುವುದು ಅಭಿವೃದ್ಧಿಗೆ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ.ಜಿ. ಗೋವಿಂದಪ್ಪ, ಆರ್‌ಡಿಪಿಆರ್‌ಗೆ ಹೊಸ ಸಚಿವರು ಬಂದಿದ್ದಾರೆ. ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.
ತಹಸೀಲ್ದಾರ್ ತಿರುಪತಿ ವಿ. ಪಾಟೀಲ್, ತಾಪಂ ವ್ಯವಸ್ಥಾಪಕ ಕರಿಯಪ್ಪ ಇತರರಿದ್ದರು.