ಮೊಳಕಾಲ್ಮೂರು ಪಟ್ಟಣದಲ್ಲಿರುವ ಉದ್ಯಾನವನ. Park
ಚಿತ್ರದುರ್ಗ

ಉದ್ಯಾನವನಗಳಿಗೆ ಪಪಂ ಅಧಿಕಾರಿಗಳ ದೌಡು

ವಿಜಯವಾಣಿ ವರದಿ ಪರಿಣಾಮ, ಮುಖ್ಯಮಂತ್ರಿಗಳ ಕಚೇರಿಯಿಂದ ತ್ವರಿತ ಸ್ಪಂದನೆ

ಮೊಳಕಾಲ್ಮೂರು: ಪಟ್ಟಣದಲ್ಲಿ ಕುಡುಕರ ತಾಣವಾದ ಉದ್ಯಾನ ಕುರಿತು ವಿಜಯವಾಣಿಯಲ್ಲಿ ಪ್ರಕಟವಾದ ವರದಿಗೆ ಮುಖ್ಯಮಂತ್ರಿಗಳ ಕಚೇರಿ ತ್ವರಿತವಾಗಿ ಸ್ಪಂದಿಸಿದ್ದು, ಸಿಎಂ ಕಚೇರಿಯಿಂದ ನಿರ್ದೇಶನ ಬರುತ್ತಿದ್ದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪಟ್ಟಣಗಳ ಸೌಂದರ್ಯ ಹೆಚ್ಚಿಸುವಲ್ಲಿ ಉದ್ಯಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯವನ್ನು ಉದ್ಯಾನಗಳ ನಿರ್ವಹಣೆಗೂ ಕೊಡಬೇಕು. ಆದರೆ, ಪಟ್ಟಣದಲ್ಲಿನ ಉದ್ಯಾನಗಳು ಅವ್ಯವಸ್ಥೆಯಿಂದ ಕೂಡಿದ್ದು, ಸ್ವಚ್ಛತೆ ಇಲ್ಲದೇ ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ, ವಿವಿಧ ಬಡಾವಣೆ ಉದ್ಯಾನಗಳು ಕುಡಿಯುವ ನೀರು, ಆಸನಗಳು, ಸಸ್ಯಗಳ ಬೆಳವಣಿಗೆ ಇಲ್ಲದೆ ಮಕ್ಕಳ ಆಟಿಕೆ ಅಲಭ್ಯತೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ ಎಂದು ಅ. 12 ರಂದು ವಿಜಯವಾಣಿ ದಿನಪತ್ರಿಕೆ ವರದಿ ಮಾಡಿತ್ತು.

ಇದನ್ನು ಗಮನಿಸಿ ಅನುಪಾಲನ ವರದಿ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಚಿತ್ರದುರ್ಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಕೇಳಲಾಗಿತ್ತು. ಸಿಎಂ ಕಚೇರಿ ನಿರ್ದೇಶನ ಬರುತ್ತಿದ್ದಂತೆ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಂಬಂಧಿತ ಫೋಟೋಗಳೊಂದಿಗೆ ವರದಿ ಸಲ್ಲಿಸಿದ್ದಾರೆ. ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಉದ್ಯಾನವನ್ನು ಈ ಹಿಂದೆ ಸರ್ಕಾರದ ವತಿಯಿಂದ ಬಿಡುಗಡೆಯಾದ ಅನುದಾನಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ಕಾಂಪೌಂಡ್​ ಗೋಡೆ, ಸಿಮೆಂಟ್​ ಬೆಂಚ್​, ಪಾದಚಾರಿ ಮಾರ್ಗ, ಗೇಟ್​ ಹಾಗೂ ಇತ್ಯಾದಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪೊಲೀಸ್​ ಇಲಾಖೆ ಸಿಬ್ಬಂದಿ ಕಾಲ-ಕಾಲಕ್ಕೆ ಉದ್ಯಾನವನಕ್ಕೆ ಭೇಟಿ ನೀಡಿ, ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲಾಗುವುದು.

ಮುಂದಿನ ದಿನಗಳಲ್ಲಿ ಪಟ್ಟಣದ ಇತರ ಉದ್ಯಾನಗಳನ್ನು ಸರ್ಕಾರದ ಅನುದಾನ ಗಳಲ್ಲಿ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅನುಪಾಲನಾ ವರದಿಯಲ್ಲಿ ತಿಳಿಸಿದ್ದಾರೆ.